ಚಿಕ್ಕಮಗಳೂರು:  ಗಿರಿಯಾಪುರದಲ್ಲಿ ಶಿವಶರಣೆ ಹೇಮರಡ್ಡಿಮಲ್ಲಮ್ಮನವರ ನೂತನ ವಿಗ್ರಹ ಪುನರ್‌ಪ್ರತಿಷ್ಠಾಪನೆ ಮೇ ೨ರಂದು ನಡೆಯಲಿದೆ ಎಂದು ಬಡಗನಾಡು ಶ್ರೀ ಹೇಮರಡ್ಡಿ ವೀರಶೈವ ಜನಾಂಗ ಸಂಘದ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ ತಿಳಿಸಿದರು.

ಮೇ ೨ರ ಗುರುವಾರ ಬೆಳಗಿನ ೫.೩೦ರಿಂದ ೬.೩೦ರವರೆಗೆ ಪ್ರತಿಷ್ಠಾಪನೆ ನೆರವೇರಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಅವರು, ಹಿಂದಿನ ವಿಗ್ರಹವನ್ನು ಷ.ಬ್ರ.ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಂತೆ ಇದ್ದ ಜಾಗದಲ್ಲೆ ಶಾಸ್ತ್ರೋಕ್ತವಾಗಿ ಮುಕ್ತಿನೀಡಲಾಗಿದೆ. ವೇದಾ ನದಿಯಲ್ಲಿ ವಿಸರ್ಜಿಸಲಾಗಿದೆ ಎಂದರು.

ನೂತನ ವಿಗ್ರಹ ಪುನರ್ ಪ್ರತಿಷ್ಠಾ ಕಾರ್‍ಯಗಳು ಏಪ್ರಿಲ್ ೨೧ರಿಂದ ಆರಂಭಗೊಂಡಿದೆ. ಮೇ೧ರವರೆಗೂ ೧೧ದಿನಗಳು ನೂತನ ವಿಗ್ರಹಕ್ಕೆ ಅಭಿಷೇಕ ಹಾಗೂ ಪೂಜಾವಿಧಾನಗಳನ್ನು ಪ್ರತಿ ದಿನ ೧೧ಗ್ರಾಮ ಘಟಕದ ವತಿಯಿಂದ ನಡೆಸಲಾಗುತ್ತಿದೆ. ಈಗಾಗಲೇ ಗೋಮ ಮತ್ತು ಜಲ, ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ, ಆದ್ಯ-ಪಾದ್ಯ, ಎಳನೀರು ಜಲದಿಂದ ನಿತ್ಯ ಅಭಿಷೇಕ ರುದ್ರಾಭಿಷೇಕ ನಡೆದಿದೆ. ನಾಳೆ ಭತ್ತ ಮತ್ತು ನಾಡಿದ್ದು ನವಧಾನ್ಯಗಳ ಅಭಿಷೇಕ ನಡೆಯಲಿದೆ ಎಂದರು.

ಗುರುವಾರ ಬೆಳಗ್ಗೆ ೮ರಿಂದ ೯ರವರೆಗೆ ಗಿರಿಯಾಪುರದ ವೀರಗಾಸೆ ಕಲಾತಂಡದೊಂದಿಗೆ ಹೊಳೆಪೂಜೆ, ೧೦೧ಪೂರ್ಣಕುಂಭಗಳ ಅಭಿಷೇಕ ನಡೆಯಲಿದೆ. ಮಧ್ಯಾಹ್ನ ೧೨.೩೦ರಿಂದ ಗ್ರಾಮದ ಶ್ರೀಮಲ್ಲಿಕಾಂಭ ಸಮುದಾಯ ಭವನದಲ್ಲಿ ಧಾರ್ಮಿಕ ಸಭಾ ಕಾರ್‍ಯಕ್ರಮ. ಹಾರನಹಳ್ಳಿ ಕೋಡಿಮಠಾಧ್ಯಕ್ಷ ಡಾ.ಶ್ರೀಶಿವಾನಂದಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಏರ್ಪಡಿಸಲಾಗಿದೆ.

ಎಡೆಯೂರು ಕ್ಷೇತ್ರ ಶ್ರೀರೇಣುಕಶಿವಾಚಾರ್ಯರು, ಹುಣಸಘಟ್ಟದ ಶ್ರೀಗುರುಮೂರ್ತಿ ಶಿವಾಚಾರ್ಯರು, ಗೋಣಿಬೀಡು ಶೀಲಸಂಪಾದನಾ ಮಠದ ಡಾ.ಸಿದ್ದಲಿಂಗಸ್ವಾಮಿಗಳು ಮತ್ತು ಕೆ.ಬಿದರೆ ದೊಡ್ಡಮಠದ ಶ್ರೀಪ್ರಭುಕುಮಾರ ಶಿವಾಚಾರ್ಯರ ಸಮ್ಮುಖದಲ್ಲಿ ನಡೆಯುವ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಸಂಘದ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ ವಹಿಸುವರು. ಗಿರಿಯಾಪುರ ಶ್ರೀವೃಷಬೇಂದ್ರ ಗ್ರಾಮಸಮಿತಿ ಅಧ್ಯಕ್ಷ ಪ್ರಭುಕುಮಾರ ಮುಖ್ಯಅತಿಥಿಗಳಾಗಿರುವರು. ನೂತನ ವಿಗ್ರಹ ದಾನಿ ಕಾಂತರಾಜು ಅವರನ್ನು ಗೌರವಿಸಲಾಗುವುದೆಂದರು.

ಮುದ್ದೇಬಿಹಾಳ ತಾಲ್ಲೂಕು ತಾಳಿಕೋಟೆ-ಶ್ರೀಶೈಲದ ಕಡೆಯಿಂದ ಜಿಲ್ಲೆಗೆ ರಡ್ಡಿ ಜನಾಂಗ ವಲಸೆ ಬಂದು ೧೧ಗ್ರಾಮಗಳಲ್ಲಿ ನೆಲೆನಿಂತಿದ್ದಾರೆ. ೧೯೧೮ರಲ್ಲಿ ಗಿರಿಯಾಪುರ ಕೇಂದ್ರವಾಗಿಸಿಕೊಂಡು ಸಂಘಟಿತರಾಗಿ ಕುಲದೇವತೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನವನ್ನು ನಿರ್ಮಾಣಮಾಡಿ ಆರಾಧಿಸುತ್ತಾ ಬರಲಾಗುತ್ತಿದೆ. ಪ್ರತಿವರ್ಷ ಮಲ್ಲಮ್ಮನವರ ಜಯಂತಿ ಹಾಗೂ ೧೨ವರ್ಷಗಳಿಗೊಮ್ಮೆ ಜಾತ್ರಾಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಮೇ ೯ ಮತ್ತು ೧೦ರಂದು ಹಿರೇನಲ್ಲೂರಿನಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಿಲ್ಲಾಮಟ್ಟದ ಜಯಂತ್ಯೋತ್ಸವವು ಶ್ರೀಮದ್ ಉಜ್ಜೆಯಿನಿ ಸದ್ಧರ್ಮಸಿಂಹಾಸನಧೀಶ್ವರ ೧೦೦೮ಶ್ರೀಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾರೋಟ ಉತ್ಸವದೊಂದಿಗೆ ನಡೆಯಲಿದೆ ಎಂದು ರೇವಣ್ಣಸಿದ್ದಪ್ಪ ವಿವರಿಸಿದರು.

ಕೇಂದ್ರ ಸಂಘದ ಕಾರ್‍ಯದರ್ಶಿ ಶಿವಶಂಕರಪ್ಪ, ಖಜಾಂಚಿ ಜಿ.ಎಂ.ಹೇಮಿರಡ್ಡಿ, ಹಿರೇನಲ್ಲೂರು ಘಟಕದ ಅಧ್ಯಕ್ಷ ಕುಮಾರಸ್ವಾಮಿ ಉಪಸ್ಥಿತರಿದ್ದರು.‌

Re-consecration of Mallamma idol at Giriyapur on 2nd May