ಚಿಕ್ಕಮಗಳೂರು: ನಗರದ ಜೆವಿಎಸ್ ಶಾಲೆಯಲ್ಲಿ ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗಿ ಪಾಠ-ಪ್ರವಚನ ನಡೆಸದೆ ಪ್ರಪಂಚದಲ್ಲಿ ನಡೆಯುವ ವ್ಯವಹಾರ, ಎಲ್ಲಾ ವಿದ್ಯಮಾನಗಳ ಬಗ್ಗೆ ಕಲಿಸಿದ್ದೇವೆಂದು ಭಾವಿಸಿದ್ದೇನೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.

ಅವರು ಇಂದು ಜೆವಿಎಸ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಶಾರದಾ ಪೂಜಾ ಕಾರ್ಯಕ್ರಮ ಹಾಗೂ ಪ್ರವೇಶ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಇದೊಂದು ಮರೆಯಲಾಗದ ಕಾಲಘಟ್ಟ. ಒಂದು ಹಂತ ಮುಗಿಸಿ ಮುಂದಿನ ಶಿಕ್ಷಣಕ್ಕೆ ಹೆಜ್ಜೆ ಇಡಲು ತಯಾರಿ ನಡೆಸುತ್ತಿದ್ದೀರಿ. ಸೋಮವಾರದಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಬರುವ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗದೆ, ಭಯಪಡದೆ ಧೈರ್ಯದಿಂದ ಪರೀಕ್ಷೆ ಬರೆಯಿರಿ ಎಂದು ಕರೆ ನೀಡಿದರು.

ಎಲ್‌ಕೆಜಿ ಯಿಂದ ಹತ್ತನೇ ತರಗತಿವರೆಗೆ ಜೆವಿಎಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೋಗುತ್ತಾರೆ ಎಂಬ ಬಗ್ಗೆ ನಮಗೆ ಭಾವನೆ ಇದೆ. ಆದರೂ ಮುಂದಿನ ನಿಮ್ಮ ವ್ಯಾಸಂಗ ಉತ್ತಮ ಭವಿಷ್ಯದ ಕಡೆ ಇರಲಿ ಎಂದು ಹಾರೈಸಿದರು.

ವಿದ್ಯಾರ್ಥಿಗಳು ಪೋಷಕರ, ಶಿಕ್ಷಕರ, ಶಾಲೆಯ ಹೆಸರು ಉಳಿಸುವ ನಿಟ್ಟಿನಲ್ಲಿ ಸದಾ ವ್ಯಾಸಂಗದ ಕಡೆ ಹೆಚ್ಚು ಗಮನ ಹರಿಸಿ, ಋಣಾತ್ಮಕ ಆಲೋಚನೆಗಳಿಗೆ ಆಸ್ಪದ ಕೊಡದೆ ಧನಾತ್ಮಕ ಆಲೋಚನೆಗಳಿಗೆ ಒತ್ತುನೀಡಿ ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿ ಎಂದು ಹೇಳಿದರು.

ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ಮಾತನಾಡಿ, ವಿದ್ಯಾರ್ಥಿಗಳು ಕಲರ್ ಡ್ರೆಸ್‌ನಲ್ಲಿ ಬಂದು ಇಡೀ ವರ್ಷ ವ್ಯಾಸಂಗ ಮಾಡಿದ ಈ ದಿನ ಶುಭದಿನದಂದು ಶಾರದಾದೇವಿ ಪೂಜೆ ಮಾಡಿ ಆಶೀರ್ವಾದ ಪಡೆದು ಪರೀಕ್ಷೆ ಬರೆಯಲು ಸಿದ್ದರಾಗಿದ್ದೀರಿ ಎಂದು ಭಾವಿಸಿದ್ದೇನೆ ಎಂದರು.

ಪ್ರತೀ ಕೆಲಸಕ್ಕೂ ಒಂದೊಂದು ದೇವತೆಗಳಿದ್ದು ಇವರನ್ನು ಪೂಜಿಸುವ ಮೂಲಕ ಕೆಲಸದಲ್ಲಿ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ವಿಧ್ಯೆಗೆ ಸರಸ್ವತಿ, ಬೇರೆ ಕೆಲಸಕ್ಕೆ ಗಣಪತಿ, ಹಣಕ್ಕೆ ಲಕ್ಷ್ಮಿ ಹೀಗೆ ಹಲವಾರು ವೈವಿದ್ಯತೆ ಉಳ್ಳ ಭಾರತದಲ್ಲಿ ಜೀವಿಸುವ ನಮಗೆ ಇವೆಲ್ಲಾ ಒಂದು ಪಾಠ ಎಂದು ಹೇಳಿದರು.
ಸಾತ್ವಕ ಆಹಾರ ಸೇವಿಸಿ ಮಾನಸಿಕ ದೃಢತೆಯಿಂದ ಬುದ್ಧಿಶಕ್ತಿಯನ್ನು ಉಪಯೋಗಿಸಿ ಎಂದು ಹೇಳಿದ ಅವರು ಅಜ್ಞಾನ ನಮ್ಮನ್ನು ತಿನ್ನುತ್ತೆ ಎಂಬುದನ್ನು ಮನಗಂಡು ಪರೀಕ್ಷೆಯನ್ನು ಎದುರಿಸಿ ಎಂದು ಹಾರೈಸಿದರು.

ಇಂದೇ ಸರಸ್ವತಿ ಮುಂದೆ ಸಂಕಲ್ಪ ಮಾಡಿ ನಾವು ಮುಂದೇನಾಗಬೇಕೆಂದು ನಿರ್ಧರಿಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ ಶಾಲೆ, ಶಿಕ್ಷಕರಿಗೆ, ಪೋಷಕರಿಗೆ ಹೆಸರು ತನ್ನಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಲಕ್ಷ್ಮಣಗೌಡ, ಸಿಇಓ ಕುಳ್ಳೇಗೌಡ, ವ್ಯವಸ್ಥಾಪಕ ರಾಜು, ಮುಖ್ಯ ಶಿಕ್ಷಕ ವಿಜಿತ್, ಮತ್ತಿತರರು ಉಪಸ್ಥಿತರಿದ್ದರು.

Sharada Puja program organized for SSLC students at JVS School