ನವದೆಹಲಿ: ಶ್ರದ್ಧಾ ವಾಕರ್‌ (Shraddha Walker) ಕೊಲೆ ಪ್ರಕರಣವನ್ನು ಧಾರ್ಮಿಕ ಕೋನದಲ್ಲಿ ಬಿಜೆಪಿ ಬಿಂಬಿಸುತ್ತಿದೆ. ಆದರೆ ಇದು ʼಲವ್‌ ಜಿಹಾದ್‌ʼ (Love Jihad) ಅಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ (Asaduddin Owaisi) ಹೇಳಿದ್ದಾರೆ.

ಬಿಜೆಪಿ (BJP) ರಾಜಕೀಯ ಸಂಪೂರ್ಣ ತಪ್ಪಾಗಿದೆ. ಇದು ಲವ್ ಜಿಹಾದ್‌ನ ಸಮಸ್ಯೆಯಲ್ಲ. ಮಹಿಳೆಯ ಮೇಲಿನ ಶೋಷಣೆ ಮತ್ತು ನಿಂದನೆಯ ವಿಷಯವಾಗಿದೆ. ಈ ದೃಷ್ಟಿಕೋನದಲ್ಲಿ ಪ್ರಕರಣವನ್ನು ನೋಡಬೇಕು ಮತ್ತು ಹತ್ಯೆಯನ್ನು ಖಂಡಿಸಬೇಕು ಎಂದು ಓವೈಸಿ ತಿಳಿಸಿದ್ದಾರೆ.

ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ಇಟ್ಟುಕೊಂಡಿರುವ ಅಜಂಗಢ ಘಟನೆಯನ್ನು ನೆನಪಿಸಿಕೊಂಡ ಓವೈಸಿ, ಇಂತಹ ಘಟನೆಗಳು ದುಃಖಕರವಾಗಿವೆ. ಆದರೆ ಇದನ್ನು ಹಿಂದೂ-ಮುಸ್ಲಿಂ ಕೋನದಲ್ಲಿ ರಾಜಕೀಯಗೊಳಿಸಬಾರದು ಎಂದಿದ್ದಾರೆ.

ಗುಜರಾತ್‌ ಚುನಾವಣೆ ಕುರಿತು ಮಾತನಾಡಿ, ಚುನಾವಣೆಗೆ ಸ್ಪರ್ಧಿಸಲು ಬೇರೆ ಪಕ್ಷದ ಅನುಮತಿ ಬೇಕಾಗಿಲ್ಲ, ಅದು ನಮ್ಮ ಹಕ್ಕು. ನಾವು ದೇಶದ ಜನರು ಮತ್ತು ಸಂವಿಧಾನವನ್ನು ನಂಬುತ್ತೇವೆ. ನಮ್ಮ ಹೋರಾಟವು ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.

Shraddha Walker murder case is not love jihad