ಚಿಕ್ಕಮಗಳೂರು: ರಾಷ್ಟ್ರೀಯ ಬಿಲ್ಲವರ ಮಹಾಮಂಡಳಕ್ಕೆ ೨೫ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಮಾ.೧೦ ರಂದು ಮೂಲ್ಕಿಯಲ್ಲಿ ತನ್ನ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ ಎಂದು ಮಂಡಳದ ಪ್ರಧಾನ ಸಂಚಾಲಕ ಎಚ್.ಎಂ.ಸತೀಶ್ ಹೇಳಿದರು.

ಸುದ್ದಿಗೊಷ್ಠಿಯಲ್ಲಿಂದು ಮಾತನಾಡಿ ಈ ವಿಷಯ ತಿಳಿಸಿದ ಅವರು ಬಿಲ್ಲವ ಮತ್ತು ಈಡಿಗ ಸಮುದಾಯ ಒಟ್ಟು ೨೬ ಉಪಪಂಗಡವನ್ನು ಹೊಂದಿದ್ದೇವೆ. ನಮ್ಮ ಸಮುದಾಯ ವಿವಿಧ ಕ್ಷೇತ್ರದಲ್ಲಿ ಹಿಂದಿದೆ. ರಾಜಕೀಯದಲ್ಲಿ ಸದೃಢ ಆಗಬೇಕು ಎಂಬ ಕನಸಿನೊಂದಿಗೆ ದೇಶ-ವಿದೇಶದಲ್ಲಿರುವ ಸಮುದಾಯದ ಜನರನ್ನು ಸೇರಿಸಿ ಮೂಲ್ಕಿಯಲ್ಲಿ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಿದ್ದೇವೆ ಎಂದು ಹೇಳಿದರು.

೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡದೆ ನಮ್ಮ ಸಮುದಾಯವನ್ನು ಕಡೆಗಣಿಸಿವೆ. ಈ ಹಿಂದೆ ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಲ್ಲವ ಸಮುದಾಯಕ್ಕೆ ಟಿಕೆಟ್ ನೀಡುವ ಪರಿಪಾಟವಿತ್ತು. ಅದೂ ತಪ್ಪಿ ಹೋಗಿದೆ. ಮುಂಬರುವ ೧೮ ನೇ ಲೋಕಸಭಾ ಚುನಾವಣೆಯಲ್ಲಿ ಸಮುದಾಯದ ಮುಖಂಡರನ್ನು ಎರಡೂ ಪಕ್ಷಗಳು ಪರಿಗಣಿಸದಿದ್ದರೆ ಮೂಲ್ಕಿ ಸಮಾವೇಶದಲ್ಲಿ ಚುನಾವಣೆ ಬಹಿಷ್ಕರಿಸಬಹುದಾದ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದರ ಹೊಣೆಯನ್ನು ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಹೊರಬೇಕು ಎಂದರು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವಕ್ಕೆ ಜಿಲ್ಲೆಯಿಂದ ೧೦ ಸಾವಿರ ಮಂದಿ ಸಮುದಾಯದ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಮೂಲ್ಕಿಯ ಭವಾನಿ ಶಂಕರ್ ಕಾಂಪೌಂಡ್ ಬಳಿ ಬೆಳಗ್ಗೆ ೯ ಕ್ಕೆ ಆರಂಭವಾಗುವ ಕಾರ್ಯಕ್ರಮವನ್ನು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಉದ್ಘಾಟಿಸುವರು, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ್ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದು, ಸೋಲೂರು ಮಠದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕನ್ಯಾಡಿ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ, ನಿಪ್ಪಾಣಿ ಮಹಾಕಾಳಿ ಮಠದ ಅರುಣಾನಂದ ಸ್ವಾಮೀಜಿ, ಮಹಾಬಲೇಶ್ವರ ಸ್ವಾಮೀಜಿ, ರಾಜ್ಯ ಶಿಕ್ಷಣ ಸಚಿವ ಮಧುಬಂಗಾರಪ್ಪ ಮತ್ತಿತರೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಈಡಿಗ, ಬಿಲ್ಲವ ಸಮಾಜದ ಮುಖಂಡರಾದ ಕೆ.ಸಿ.ಗುಣಶೇಖರ್, ವಾಸುಪೂಜಾರಿ, ನಾರಾಯಣ, ಅಭಿಷೇಕ್, ಅಶೋಕ ಮತ್ತಿತರರಿದ್ದರು.

Silver festival for Rashtriya Billava Mahamandal at Mulki