ಚಿಕ್ಕಮಗಳೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಉತ್ತಮ ಅವಕಾಶಗಳಿವೆ, ಕ್ರೀಡೆಯಲ್ಲೂ ಸಾಧನೆ ಮಾಡಿ ತಮ್ಮ ಗುರಿ ಮುಟ್ಟಬಹುದೆಂದು ಬೀರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ.ಪ್ರವೀಣ್‌ಕುಮಾರ್ ತಿಳಿಸಿದರು.

ಇಂದು ಕಲ್ಯಾಣ ನಗರದ ನಚ್ಚರ್ ಇಂಟರ್ ನ್ಯಾಷನಲ್ ಸ್ಕೂಲ್‌ನ ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡಾ ಜೋತಿಯನ್ನು ಸ್ವೀಕರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಬಹಾಳ ಶಿಸ್ತಿನಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದ ಅವರು ಯಾವುದೇ ವಿ.ವಿಗಳಲ್ಲಿ ಕಡಿಮೆ ಇಲ್ಲದಂತೆ ಇಲ್ಲಿ ಕ್ರೀಡಾಕೂಟದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದರು.

ಆಟದ ಮೈದಾನ, ಗುಂಡಿ, ಕಲ್ಲುಗಳಿಲ್ಲದೆ ತುಂಬಾ ಅಚ್ಚುಕಟ್ಟಾಗಿದ್ದು ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ತೊಂದರೆ ಇಲ್ಲದಂತೆ ಆಟೋಟ ಸ್ಪರ್ಧೆಗಳು ನಡೆಯುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

ಪ್ರಾಂಶುಪಾಲರಾದ ಟಿ.ಸುಜಾತ ಮಾತನಾಡಿ ನಮ್ಮ ಶಾಲೆಯಲ್ಲಿ ನುರಿತ ಶಿಕ್ಷಕರಿಂದ ಉತ್ತಮ ವಿದ್ಯಾಭ್ಯಾಸ ನೀಡಲಾಗುತ್ತಿದೆ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವುದರ ಜೊತೆಗೆ ಮಾರ್ಗದರ್ಶನವನ್ನು ನೀಡಲಾಗುತ್ತಿದೆ ಎಂದರು.

ಆಡಳಿತಾಧಿಕಾರಿ ರಾಕೇಶ್ ಮಾತನಾಡಿ ನರ್ಚರ್ ಶಾಲೆಯಿಂದ ಪ್ರತೀ ವರ್ಷದಂತೆ ಈ ವರ್ಷವೂ ಕ್ರೀಡಾಕೂಟ ಏರ್ಪಡಿಸಿದ್ದು, ವಿದ್ಯಾರ್ಥಿಗಳು ಮೊಬೈಲ್, ಇಂಟರ್‌ನೆಟ್, ಟಿವಿ ಮುಂತಾದವುಗಳಿಗೆ ಮಾರುಹೋಗಿ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಕಡಿಮೆಯಾಗುತ್ತಿದೆ, ವಿದ್ಯಾರ್ಥಿಗಳು ಕ್ರೀಡಾಭ್ಯಾಸದಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಸುಪ್ರೀಯ ಹಾಗೂ ಸಹ ಶಿಕ್ಷಕರು, ಮತ್ತಿತರರು ಉಪಸ್ಥಿತರಿದ್ದರು.

Sports event of Natcher International School