ಚಿಕ್ಕಮಗಳೂರು : ಶ್ರೀರಾಮ ಸೇನೆ ವತಿಯಿಂದ ನವೆಂಬರ್ ೮ ರಿಂದ ೭ ದಿನಗಳ ಕಾಲ ದತ್ತಮಾಲಾ ಅಭಿಯಾನಹಮ್ಮಿಕೊಂಡಿದ್ದು ನವೆಂಬರ್ ೧೪ ರ ದತ್ತಾತ್ರೇಯ ಪೀಠದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ದತ್ತಪಾದುಕೆ ದರ್ಶನದ ಜತೆಗೆ ಹೋಮ, ಪೂಜೆ, ಧಾರ್ಮಿಕ  ಸಭೆಗೆ ಅನುಮತಿ ನೀಡುವಂತೆ ಶ್ರೀರಾಮ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.

ನ.೧೪ ರಂದು ದತ್ತಪೀಠದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪೀಠಕ್ಕೆ ತೆರಳಿ ದತ್ತಾತ್ರೇಯನ ದರ್ಶನ ಪಡೆದು, ಸಾಧು ಸಚಿತರ ನೇತೃತ್ವದಲ್ಲಿ ಹೋಮ, ಪ್ರಜೆ, ಧಾರ್ಮಿಕ ಸಭೆ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದು ಜಿಲ್ಲಾಡಳಿತ ಅನುಮತಿ ನೀಡುವಂತೆ ಮನವಿ ಮಾಡಿದರು.

ಕಳೆದ ಹದಿನೈದು ವರ್ಷಗಳಿಂದ ದತ್ತಪೀಠದ ವಿಮುಕ್ತಿಗಾಗಿ ಶ್ರೀರಾಮ ಸೇನೆ ಹೋರಾಟ ನಡೆಸುತ್ತಾ ಬಂದಿದೆ. ಸಮಸ್ಯೆಯನ್ನು ಇತ್ಯರ್ಥಪಡಿಸಲು ರಾಜ್ಯ ಸರ್ಕಾರಕ್ಕೆ ಸುಪ್ರಿಂಕೋರ್ಟ್ ತೀರ್ಪು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಆ ನಿಟ್ಟಿನಲ್ಲಿ ದತ್ತಾಪೀಠ ಗುಹಾಂತರ ದೇವಾಲಯಕ್ಕೆ ಹಿಂದೂ ಅರ್ಚಕರ ನೇಮಿಸಿ ತ್ರಿಕಾಲ ಪೂಜೆಗೆ ಅವಕಾಶ ನೀಡಬೇಕು, ಗೋರಿಗಳನ್ನು ಸ್ಥಳಾಂತರಿಸಬೇಕು, ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕು, ದತ್ತಪೀಠಕ್ಕೆ ಶ್ರೀ ದತ್ತಾತ್ರೇಯ ಪೀಠ ಎಂಬ ಒಂದೇ ಹೆಸರು ಘೋಷಣೆ ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ಪ್ರಧಾನ ಕಾರ್ಯಾದರ್ಶಿ ಮಹೇಶ್ ಮೇದಾರ್, ಜಿಲ್ಲಾ ಉಪಾಧ್ಯಕ್ಷ ದಿಲೀಪ್ ಶೆಟ್ಟಿ, ತಾಲ್ಲೂಕು ಅಧ್ಯಕ್ಷ ಪುನೀತ್, ದುರ್ಗಾಸೇನೆ ಜಿಲ್ಲಾಧ್ಯಕ್ಷೆ ಶಾರದಮ್ಮ, ಕೃಷ್ಣಕುಮಾರ್ ಸೇರಿದಂತೆ ಮತ್ತಿತರರು ಇದ್ದರು.