ಚಿಕ್ಕಮಗಳೂರು: ಜಿಲ್ಲೆಯ ಮಾಚಗೊಂಡನಹಳ್ಳಿ ಶ್ರೀ ಬೇರುಗಂಡಿ ಬೃಹನ್ಮಠದಲ್ಲಿ ಸುಮಾರು ೧.೫೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರ ಮತ್ತು ಗೋಪುರ ಕಳಸಾರೋಹಣ ಮೇ ೧ ಮತ್ತು ೨ ರಂದು ನಡೆಯಲಿದೆ ಎಂದು ಮಠದ ರೇಣುಕ ಮಹಾಂತ ಶಿವಾಚಾರ್ಯ ಶ್ರೀಗಳು ತಿಳಿಸಿದರು.

ಅವರು ಇಂದು ಶ್ರೀ ಮಠದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ತಮ್ಮ ದ್ವಾದಶ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಲೋಕಶಾಂತಿಗಾಗಿ ಹೋಮ-ಹವನ ಧರ್ಮ ಜಾಗೃತಿ ಸಮಾರಂಭ ಇದೇ ಅವಧಿಯಲ್ಲಿ ಜರುಗಲಿದೆ ಎಂದರು.

ಈ ಎರಡು ದಿನ ಕಾರ್ಯಕ್ರಮಗಳ ದಿವ್ಯಸಾನಿಧ್ಯವನ್ನು ಬಾಳೇಹೊನ್ನೂರು ಶ್ರೀ ರಂಭಾಪುರಿ ಶ್ರೀ ಹಾಗೂ ನೊಣವಿನಕೆರೆ ಶ್ರೀಗಳು ವಹಿಸಿ ಆಶೀರ್ವಚನ ನೀಡಲಿದ್ದಾರೆ. ವಿವಿಧ ಮಠಾಧೀಶರುಗಳು ಉಪದೇಶಾಮೃತ ನೀಡಲಿದ್ದು ಉದ್ಘಾಟನೆಯನ್ನು ಶೃಂಗೇರಿ ಕ್ಷೇತ್ರದ ಶಾಸಕರು ಹಾಗೂ ನವೀಕರಿಸಬಹುದಾದ ಅಭಿವೃದ್ಧಿಪಡಿಸುವ ಇಂಧನ ನಿಗಮದ ಅಧ್ಯಕ್ಷ ಟಿ.ಡಿ ರಾಜೇಗೌಡ ನೆರವೇರಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಉಪಸಭಾಪತಿ ಎಂ.ಕೆ ಪ್ರಾಣೇಶ್, ಶಾಸಕರುಗಳಾದ ಹೆಚ್.ಡಿ ತಮ್ಮಯ್ಯ, ನಯನ ಮೋಟಮ್ಮ, ಮಾಜಿ ಶಾಸಕರಾದ ಸಿ.ಟಿ ರವಿ, ಎಂ.ಪಿ ಕುಮಾರಸ್ವಾಮಿ, ಮಾಜಿ ಎಂ.ಎಲ್.ಸಿ ಗಾಯಿತ್ರಿ ಶಾಂತೇಗೌಡ, ಮಾಜಿ ಸಚಿವ ಬಿ.ಬಿ ನಿಂಗಯ್ಯ, ಹೆಚ್.ಎಂ ಲೋಕೇಶ್, ವೀರರಾಜಗೌಡ, ಮಹೇಶ್ ಕೆ.ಎಸ್, ಶಿವಸ್ವಾಮಿ, ಧೃವಕುಮಾರ್, ಜಿ.ಎಂ ರಾಜಶೇಖರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬಾಳೆಹೊನ್ನೂರು ಶ್ರೀ ಪಂಚಪೀಠಗಳ ಮೂಲ ಕೇಂದ್ರ ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದ ಶಾಖ ಮಠ ಕೂಡ ಶ್ರೀ ಬೇರುಗಂಡಿ ಮಠವು ಆಗಿದೆ. ವೀರಶೈವ ಪಂಚಪೀಠಗಳು ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆಯನ್ನು ಉಂಟು ಮಾಡುತ್ತಾ ಬಂದಿದೆ.

ಶ್ರೀಮದ್ ರಂಭಾಪುರಿ ಪೀಠ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಾಹಿತ್ಯ ಸಂಸ್ಕೃತಿ ಸಂವರ್ದಿಸಲಿ, ಶಾಂತಿ ಸಮೃದ್ಧಿ ಸಮಸ್ತರಿಗೂ ದಕ್ಕಲಿ ಎಂದು ಹಾರೈಸುತ್ತಿದೆ ಎಂದರು.

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ವೀರಶೈವ ಸಮಾಜ ನೀಡಿದ ಕೊಡುಗೆ ಅಪಾರವಾಗಿದೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಈ ನಾಡಿನ ವೀರಶೈವ ಪಾತ್ರವನ್ನು ಮರೆಯುವಂತಿಲ್ಲ ಸರ್ವಸಮಾನತೆಯ ನೆಲಗಟ್ಟಿನ ಮೇಲೆ ಮಾನವೀಯ ಮೌಲ್ಯಗಳನ್ನು ವೀರಶೈವ ಧರ್ಮದ ಬೆಳಕನ್ನು ನೀಡಿದ್ದಲ್ಲದೆ ಎಲ್ಲರನ್ನೂ ಆತ್ಮಗೌರವ ಮೂಡುವಂತೆ ಮಾಡುವಲ್ಲಿ ಶ್ರಮಿಸಿದೆ. ಮಠಮಾನ್ಯ ಹಾಗೂ ದಾನಿಗಳ ಕೊಡುಗೆ ಅಪಾರವಿದೆ ಎಂದು ಹೇಳಿದರು.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಹೋಬಳಿಯಲ್ಲಿರುವ ಶ್ರೀ ಬೇರುಗಂಡಿ ಮಠವು ಶ್ರೀ ರಂಭಾಪುರಿ ಬಾಳೆಹೊನ್ನೂರು ಶಾಖ ಮಠವಾಗಿದ್ದು ಸಂಪ್ರಾದಾಯಿಕ ಪೂಜೆ, ಪುರಸ್ಕಾರ, ವೇದೋಪನಿಷತ್ತು, ಪ್ರತಿಭೆಗಳಿಗೆ ಪುರಸ್ಕಾರ, ರೈತರಿಗೆ ಸಾಂತ್ವಾನ, ಕಲೆ ಸಾಹಿತ್ಯಗಳಿಗೆ ಮಾರ್ಗದರ್ಶನ ಹಾಗೂ ಸಹಕಾರ ನೀಡಿಕೊಂಡು ಬರುತ್ತಿದ್ದು ಶ್ರೀ ಮಠವು ಅನ್ನದಾಸೋಹ, ಅಕ್ಷರದಾಸೋಹ, ಜ್ಞಾನದಾಸೋಹ ಸೇರಿದಂತೆ ಪ್ರಾಚೀನ ಸಿದ್ದೇಶ್ವರ ಸ್ವಾಮಿ ಕೃಪೆಯಿಂದ ಹಾಗೂ ಶಿವಚಾರ್ಯರ ಆಶೀರ್ವಾದದಿಂದ ಸದ್ಭಕ್ತರ ಆಸೆಯಂತೆ ಮಠವು ಪ್ರಗತಿಯತ್ತ ಸಾಗುತ್ತಿದೆ ಎಂದರು.

ಬೇರುಗಂಡಿ ಮಠವು ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯ ಮಡಿಲಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ಸೇರಿದಂತೆ ಶ್ರೀ ಮಠ ಉತ್ತಮ ಪರಿಸರದಲ್ಲಿ ಕಂಗಳಿಸುತ್ತಿದೆ. ಸಕಲರಿಗೂ ಒಳ್ಳೆಯದನ್ನೇ ಬಯಸಿದ ಮಠವು ಜಾತಿಗಿಂತ ನೀತಿ ತತ್ವಕ್ಕಿಂತ ಆಚರಣೆ ಮಾತಿಗಿಂತ ಕೃತಿ ಬೋಧನೆಗಿಂತ ಸಾಧನೆ ದಾನಕ್ಕಿಂತ ದಾಸೋಹ ಧಾರ್ಮಿಕ ಸಂಸ್ಕಾರ ಸದ್ವಿಚಾರಗಳನ್ನು ಕೊಟ್ಟ ಕೀರ್ತಿ ವೀರಶೈವ ಧರ್ಮ ಹಾಗೂ ಮಠಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ಸದ್ಭಾವನೆಯ ದ್ಯೋತಕವಾದ ಈ ನೆಲದಲ್ಲಿ ಧಾರ್ಮಿಕ ಜಾಗೃತಿ ನಿರಂತರವಾಗಿ ನಡೆದು ಬಂದು ಧಾರ್ಮಿಕ ಸೇವೆ ಹಾಗೂ ಧಾರ್ಮಿಕ ನೆಲೆಯಾಗಿದೆ ಮಠದಲ್ಲಿ ಧರ್ಮ ಬೆಳೆದು ಬಂದಿದೆ ವೇದಗಳ ಕಾಲದಿಂದ ಹಿಡಿದು ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಅದಕ್ಕೆ ಚ್ಯುತಿ ಬಂದಿಲ್ಲ ಬರುವುದಿಲ್ಲ ತಮ್ಮ ಚಿಂತನೆಯಲ್ಲಿ ಪ್ರಶಾಂತವಾದ ಪ್ರಕೃತಿ ಮಡಿಲನ್ನು ಆಶ್ರಯಿಸಿ ಪರಮ ತತ್ವದ ಚಿಂತನೆಯಲ್ಲಿ ತೊಡಗಿರುವ ಕ್ಷೇತ್ರ ಇದಾಗಿದೆ ಎಂದು ತಿಳಿಸಿದರು.

ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ನಾಗಶ್ರೀ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದೆ ಇದರಿಂದ ಬರುವ ಆಧಾಯವನ್ನು ಸರಳ ಸಾಮೂಹಿಕ ವಿವಾಹ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡದ್ದು ಜೊತೆಗೆ ಜನರಲ್ಲಿ ಧಾರ್ಮಿಕ ಭಾವನೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವಶಂಕರ್, ಹೆಚ್.ಎಂ ಲೋಕೇಶ್, ಎಂ.ಆರ್ ಪೂರ್ಣೇಶ್‌ಮೂರ್ತಿ, ವೈ.ಸಿ ಹರೀಶ್, ಜಿ.ಎಂ ರಾಜ್‌ಶೇಖರ್, ಅಶೋಕ್ ಎಂ.ಬಿ. ರಾಜೀವ್, ದೇವಾನಂದ ಮತ್ತಿತರರು ಉಪಸ್ಥಿತರಿದ್ದರು.

Sri Siddeshwara Swamy Temple at Sri Berugandi Brihanmath