ಚಿಕ್ಕಮಗಳೂರು: ನಗರದ ಪರಿಶಿಷ್ಟ ಸಮುದಾಯದ ಬಾಲಕಿಯರ ಹಾಸ್ಟೆಲ್‌ನ ೧೦ ವಿದ್ಯಾರ್ಥಿನಿಯರಲ್ಲಿ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿದ್ದು, ವಿದ್ಯಾರ್ಥಿನಿಯರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ.

ನಗರದ ಜಯನಗರ ಬಡಾವಣೆಯಲ್ಲಿರುವ ಪರಿಶಿಷ್ಟ ಪಂಗಡದ ಬಾಲಕಿಯರ ಹಾಸ್ಟೆಲ್‌ನಲ್ಲಿ ಸುಮಾರು ೭೦ ವಿದ್ಯಾರ್ಥಿನಿಯರಿದ್ದು, ಈ ವಿದ್ಯಾರ್ಥಿನಿಯರ ಪೈಕಿ ೧೦ ವಿದ್ಯಾರ್ಥಿಯರಲ್ಲಿ ದಿಢೀರ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ, ವಿದ್ಯಾರ್ಥಿನಿಯರ ಪೈಕಿ ಕೆಲವರು ಹೊಟ್ಟೆನೋವು, ಆಯಾಸದಿಂದ ಅಸ್ವಸ್ಥರಾಗಿದ್ದರೆ, ಇನ್ನು ಕೆಲವರು ಹೆದರಿಕೆ, ಗಾಬರಿಯಿಂದ ಅಸ್ವಸ್ಥರಾಗಿದ್ದರು.

ಇದನ್ನು ಕಂಡು ಹಾಸ್ಟೆಲ್ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಸುದ್ದಿ ತಿಳಿಸಿದ್ದು, ಸ್ಥಳಕ್ಕೆ ಬಂದ ಅಧಿಕಾರಿಗಳು, ಅಸ್ವಸ್ಥರಾಗಿದ್ದ ವಿದ್ಯಾರ್ಥಿನಿಯರನ್ನು ನಗರದ ಜಿಲ್ಲಾಸ್ಪತ್ರೆ ಹಾಗೂ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ಮಧ್ಯಾಹ್ನ ಆಹಾರ ಸೇವಿಸಿದ್ದು, ಆಹಾರ ಸೇವಿಸಿದ ವಿದ್ಯಾರ್ಥಿನಿಯರು ವಿಷಾಹಾರ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಈ ಹಾಸ್ಟೆಲ್‌ನಲ್ಲಿ ೫-೭ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸುಮಾರು ೭೦ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ ೧೦ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು, ೧೦ ವಿದ್ಯಾರ್ಥಿನಿಯರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿನಿಯರು ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.

ತಾಲೂಕು ಸಮಾಜ ಕಲ್ಯಾಣಾಧಿಕಾರಿ ರೇವಣ್ಣ ಈ ಬಗ್ಗೆ ಹೇಳಿಕೆ ನೀಡಿ ಹಾಸ್ಟೆಲ್ ೧೦ ಮಕ್ಕಳಿಗೆ ರಾತ್ರಿ ಹೊತ್ತಿನಲ್ಲಿ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿದೆ. ಅನಾರೋಗ್ಯಕ್ಕೆ ಆಹಾರ ಕಾರಣವಲ್ಲ. ಮಕ್ಕಳಿಗೆ ಈ ಸಮಯಲ್ಲಿ ಇನ್ನೂ ಊಟ ನೀಡಿರಲಿಲ್ಲ. ವಿಷಾಹಾರ ಸೇವನೆ ಆಗಿದ್ದರೆ ಎಲ್ಲ ಮಕ್ಕಳೂ ಅನಾರೋಗ್ಯಕ್ಕೆ ತುತ್ತಾಗಬೇಕಿತ್ತು ಎಂದರು.

ಆದರೆ ಕೆಲ ಮಕ್ಕಳು ಹೇಳಿದ ಪ್ರಕಾರ, ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ಏನನ್ನೋ ನೋಡಿ ಗಾಬರಿಗೊಂಡಿದ್ದಾರೆ. ಹೆದರಿಕೊಂಡಿದ್ದ ಮಕ್ಕಳು ನಂತರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ೧೦ ವಿದ್ಯಾರ್ಥಿನಿಯರಿಗೂ ಚಿಕಿತ್ಸೆ ಕೊಡಿಸಲಾಗಿದೆ. ಮಕ್ಕಳು ಚೇತರಿಸಿಕೊಂಡಿದ್ದಾರೆ. ಯಾವುದೇ ಆತಂಕ ಇಲ್ಲ. ಘಟನೆ ಸಂಬಂಧ ಸಮಗ್ರ ಮಾಹಿತಿ ಕಲೆ ಹಾಕಲಾಗುವುದು ಎಂದು ಹೇಳಿದರು.

Sudden illness among 10 female students of girls hostel