ರುಬ್ಬಿದ ಮಸಾಲೆ ಪದಾರ್ಥಗಳಿಂದ ಮಾಡುವ ತರಕಾರಿ ಗೊಜ್ಜು ಎಂದರೆ ಎಂತಹವರ ಬಾಯಲ್ಲೂ ನೀರು ಬರುತ್ತದೆ. ಹುಳಿ, ಸಿಹಿ, ಖಾರ ರುಚಿ ನೀಡುವ ಗೊಜ್ಜು ಅನ್ನ, ರೊಟ್ಟಿ, ಇಡ್ಲಿ, ದೋಸೆ ಯಾವುದರೊಂದಿಗೂ ನಾಲಿಗೆ ಚಪ್ಪರಿಸಿಕೊಂಡು ಸವಿಯಬಹುದು. ನಾವಿಂದು ರುಚಿಕರವಾದ ಈರುಳ್ಳಿ ಹೂವಿನ ಗೊಜ್ಜು (Spring Onion Curry) ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ನೀವು ಇದನ್ನು ಟ್ರೈ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:
ಹೆಚ್ಚಿದ ಈರುಳ್ಳಿ ಹೂವು (ಸ್ಪ್ರಿಂಗ್ ಆನಿಯನ್) – 2 ಕಪ್
ಹೆಚ್ಚಿದ ಟೊಮೆಟೊ – 1
ಬೆಲ್ಲ – 2 ಟೀಸ್ಪೂನ್
ಹುಣಸೆ ಹಣ್ಣಿನ ರಸ – 1 ಟೀಸ್ಪೂನ್
ಅರಿಶಿನ – ಕಾಲು ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮಸಾಲೆ ತಯಾರಿಸಲು:
ತೆಂಗಿನ ತುರಿ – 1 ಕಪ್
ಉದ್ದಿನ ಬೆಳೆ – 2 ಟೀಸ್ಪೂನ್
ಕಡಲೆ ಬೇಳೆ – 1 ಟೀಸ್ಪೂನ್
ಮೆಂತ್ಯ ಬೀಜ – ಕಾಲು ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಎಳ್ಳು – ಒಂದೂವರೆ ಟೀಸ್ಪೂನ್
ಕೆಂಪು ಮೆಣಸಿನಕಾಯಿ – 5
ಕರಿಬೇವಿನ ಸೊಪ್ಪು – ಕೆಲವು
ಎಣ್ಣೆ – 2 ಟೀಸ್ಪೂನ್
ಒಗ್ಗರಣೆಗೆ:
ಸಾಸಿವೆ – 1 ಟೀಸ್ಪೂನ್
ಹಿಂಗ್ – ಚಿಟಿಕೆ
ಕರಿಬೇವಿನ ಸೊಪ್ಪು – ಕೆಲವು

ಮಾಡುವ ವಿಧಾನ:
* ಮೊದಲಿಗೆ ಈರುಳ್ಳಿ ಹೂವಿನ ತುದಿಗಳನ್ನು ಕತ್ತರಿಸಿ ತೆಗೆದುಹಾಕಿ, ಉಳಿದ ಕಾಂಡದ ಭಾಗವನ್ನು ಸಣ್ಣ ಗಾತ್ರದಲ್ಲಿ ಕತ್ತರಿಸಿಟ್ಟುಕೊಳ್ಳಿ.
* ಒಂದು ಪ್ಯಾನ್‌ನಲ್ಲಿ ಎಣ್ಣೆ ಹಾಕಿ, ಉದ್ದಿನ ಬೇಳೆ, ಕಡಲೆ ಬೇಳೆ, ಮೆಂತ್ಯ ಬೀಜ, ಜೀರಿಗೆ, ಕೆಂಪುಮೆಣಸಿನಕಾಯಿ, ಕರಿಬೇವಿನ ಸೊಪ್ಪು ಹಾಕಿ ಗರಿಗರಿಯಾಗುವವರೆಗೆ ಹುರಿಯಿರಿ.
* ಬಳಿಕ ಅದಕ್ಕೆ ತೆಂಗಿನ ತುರಿ ಸೇರಿಸಿ, 1 ನಿಮಿಷ ಹುರಿದು ಪಕ್ಕಕ್ಕಿಡಿ.
* ನಂತರ ಅದೇ ಪ್ಯಾನ್‌ನಲ್ಲಿ ಎಳ್ಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
* ಈಗ ಹುರಿದ ಎಲ್ಲಾ ಪದಾರ್ಥಗಳನ್ನು ತಣ್ಣಗಾಗಲು ಬಿಟ್ಟು, ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ ಸ್ವಲ್ಪ ನೀರು ಸೇರಿಸಿ ನಯವಾದ ಪೇಸ್ಟ್ ತಯಾರಿಸಿ.
* ಈಗ ಪ್ಯಾನ್ ಅನ್ನು ಬಿಸಿ ಮಾಡಿ, 1 ಟೀಸ್ಪೂನ್ ಎಣ್ಣೆ ಹಾಕಿ ಸ್ಪ್ರಿಂಗ್ ಆನಿಯನ್ ಹಾಗೂ ಟೊಮೆಟೊ ಸೇರಿಸಿ 3-4 ನಿಮಿಷ ಹುರಿಯಿರಿ.
* ಬಳಿಕ ಅರಿಶಿನ ಹಾಕಿ ಕೈಯಾಡಿಸಿ.
* ಈಗ ರುಬ್ಬಿದ ಮಸಾಲೆ, ಬೆಲ್ಲ, ಉಪ್ಪು ಹಾಗೂ ಹುಣಸೆ ಹಣ್ಣಿನ ರಸ ಸೇರಿಸಿ, ಸ್ವಲ್ಪ ನೀರು ಹಾಕಿ ಕಡಿಮೆ ಉರಿಯಲ್ಲಿ ಕುದಿಸಿ.
* ಈಗ ಸಣ್ಣ ಪ್ಯಾನ್‌ನಲ್ಲಿ ಒಗ್ಗರಣೆ ತಯಾರಿಸಲು ಎಣ್ಣೆ ಹಾಕಿ, ಸಾಸಿವೆ, ಹಿಂಗ್ ಹಾಗೂ ಕರಿಬೇವಿನ ಸೊಪ್ಪು ಹಾಕಿ, ಸಿಡಿಸಿ ಬಳಿಕ ಗೊಜ್ಜುಗೆ ಸೇರಿಸಿ.
* ಇದೀಗ ಈರುಳ್ಳಿ ಹೂವಿನ ಗೊಜ್ಜು ತಯಾರಾಗಿದ್ದು, ಅನ್ನ, ಇಡ್ಲಿ, ದೋಸೆಯೊಂದಿಗೆ ಸವಿಯಬಹುದು.

Super tasty Onion Flower Gojju