ನವದೆಹಲಿ: ಸಿಸ್ ಭಯೋತ್ಪಾದನೆ, ಮತಾಂತರ, ಷ್ಯಡ್ಯಂತ್ರದ ಕುರಿತ ದಿ ಕೇರಳ ಸ್ಟೋರಿ ಚಿತ್ರ ಭಾರಿ ವಿವಾದಕ್ಕೆ ಕಾರಣವಾಗಿದೆ. ಹಲವು ರಾಜ್ಯಗಳು ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದರೆ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಚಿತ್ರಕ್ಕೆ ನಿಷೇಧ ಹೇರಿದೆ. ಇದು ಮತ್ತೊಂದು ಸುತ್ತಿನ ಜಟಾಪಟಿಗೆ ಕಾರಣವಾಗಿತ್ತು. ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಸರ್ಕಾರ ಹೇರಿದ ನಿಷೇಧದ ವಿರುದ್ದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಚಿತ್ರ ತಂಡಕ್ಕೆ ಮೊದಲ ಹಂತದ ಗೆಲುವು ಸಿಕ್ಕಿದೆ. ನಿಷೇಧ ತೆರವುಗೊಳಿಸಲು ಕೋರಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಎಲ್ಲಾ ರಾಜ್ಯದಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ನಿಷೇಧ ಹೇರಲು ಕಾರಣವೇನು? ಪಶ್ಚಿಮ ಬಂಗಾಳ ಭಾರತದಲ್ಲೇ ಇದೆ ಅಲ್ವಾ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಕೇರಳ ಸ್ಟೋರಿ ಚಿತ್ರವನ್ನು ಬ್ಯಾನ್ ಮಾಡಲು ಸ್ಪಷ್ಟ ಕಾರಣಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಸಿನಿಮಾ ದ್ವೇಷ ಮತ್ತು ಹಿಂಸೆಯನ್ನು ಹರಡುತ್ತದೆ ಎಂಬ ಕಾರಣವನ್ನು ನೀಡಿ ಪಶ್ಚಿಮ ಬಂಗಾಳ ಸರ್ಕಾರ ಕೇರಳ ಸ್ಟೋರಿ ಚಿತ್ರವನ್ನು ನಿಷೇಧಿಸಿತ್ತು. ಈ ಕುರಿತು ಸುಪ್ರೀಂ ಕೇಳಿದ ಖಡಕ್ ಪ್ರಶ್ನೆಗೆ ಪಶ್ಚಿಮ ಬಂಗಾಳ ಸರ್ಕಾರ ತಡಬಡಾಯಿಸಿದೆ. ಇತರ ಎಲ್ಲಾ ರಾಜ್ಯದಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಇತರ ರಾಜ್ಯಕ್ಕಿಂತ ಪಶ್ಚಿಮ ಬಂಗಳಾ ಭಿನ್ನ ರಾಜ್ಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನಿಷೇಧದಿಂದ ಚಿತ್ರದಲ್ಲಿನ ಕಲಾತ್ಮಕ ಮೌಲ್ಯಗಳನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಚಿತ್ರ ಉತ್ತಮವಾಗಿಲ್ಲ ಎಂದರೆ ಜನರು ನೋಡುವುದಿಲ್ಲ. ಚಿತ್ರ ನೋಡಬೇಕೆ, ಬೇಡವೆ ಅನ್ನೋದನ್ನು ಜನರು ತೀರ್ಮಾನಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪಶ್ಚಿಮ ಬಂಗಾಳ ಪರ ಖ್ಯಾತ ವಕೀಲ ಅಭಿಷೇಕ್ ಮನು ಸಿಂಗ್ವಿ ವಾದ ಮಂಡಿಸಿದ್ದರು.

ಈ ಚಿತ್ರ ಪಶ್ಚಿಮ ಬಂಗಾಳದಲ್ಲಿ ಮಾತ್ರ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವೇನು? ಈ ಸಿನಿಮಾ ದ್ವೇಷ ಹಾಗೂ ಹಿಂಸೆಯನ್ನು ಹರಡುತ್ತದೆ ಅನ್ನೋ ಕಾರಣವಾದರೆ, ಇತರ ರಾಜ್ಯಗಳಲ್ಲಿ ಯಾಕಿಲ್ಲ?ಎಂದು ಸುಪ್ರೀಂ ಕೋರ್ಟ್ ಖಡಕ್ ಪ್ರಶ್ನೆ ಕೇಳಿದೆ. ಈ ಮೂಲಕ ಇದೀಗ ಸಿಎಂ ಮಮತಾ ಬ್ಯಾನರ್ಜಿಗೆ ತೀವ್ರ ಮುಖಭಂಗವಾಗಿದೆ. ಇದೀಗ ನಿಷೇಧ ವಾಪಸ್ ಪಡೆಯಬೇಕು.

ಇದೇ ವೇಳೆ ತಮಿಳುನಾಡು ಸರ್ಕಾರವನ್ನೂ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ರಾಜ್ಯ ಸರ್ಕಾರದ್ದಾಗಿದೆ. ತಮಿಳುನಾಡು ಸರ್ಕಾರ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ಸೂಕ್ತ ಭದ್ರತೆ ನೀಡಬೇಕು. ತಮಿಳುನಾಡಿನಲ್ಲಿ ಚಿತ್ರ ಪ್ರದರ್ಶನ ಸ್ಥಗಿತಗೊಳ್ಳಲು ಸ್ಪಷ್ಟ ಕಾರಣವೇನು? ಸೂಕ್ತ ದಾಖಲೆ ಸಲ್ಲಿಸಲು ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.

Supreme notice to CM Mamata