ಚಿಕ್ಕಮಗಳೂರು:  ಪ್ರಸಕ್ತ ವರ್ಷದಲ್ಲಿ ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ೫೦೦ ಯೂನಿಟ್ ರಕ್ತ ಸಂಗ್ರಹಣೆ ಗುರಿ ಹೊಂದಿದ್ದು, ಈವರೆಗೆ ನಡೆಸಿದ ೬ ರಕ್ತದಾನ ಶಿಬಿರಗಳ ಮೂಲಕ ಈಗಾಗಲೇ ೩೫೦ ಯೂನಿಟ್ ರಕ್ತ ಸಂಗ್ರಹಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಹೇಳಿದ್ದಾರೆ.

ನಗರದ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಲಯನ್ಸ್ ಕ್ಲಬ್, ಚಿಕ್ಕಮಗಳೂರು, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಮತ್ತು ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಆಶ್ರಯದಲ್ಲಿ  ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಈವರೆಗೆ ಸಂಗ್ರಹಿಸಲಾಗಿದ್ದ ೩೫೦ ಯೂನಿಟ್ ರಕ್ತವನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ನೀಡಲಾಗಿದೆ. ಸೇವಾ ಕಾರ್ಯಗಳನ್ನೇ ತನ್ನ ಧ್ಯೇಯವನ್ನಾಗಿಸಿಕೊಂಡು ಸಮಾಜಮುಖಿ ಕೆಲಸ ಮಾಡುತ್ತಿರುವ ಲಯನ್ಸ್ ಸಂಸ್ಥೆ, ಆರೋಗ್ಯ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಪರಿಸರ ಸಂರಕ್ಷಣೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಸೇರಿದ ೫೦ ಎಕರೆ ಭೂ ಪ್ರದೇಶದಲ್ಲಿ ಅರಣ್ಯ ಇಲಾಖೆಯು ೫ ಸಾವಿರ ಗಿಡಗಳನ್ನು ನೆಟ್ಟಿದ್ದು, ಅವುಗಳ ಸಂರಕ್ಷಣೆ ಜವಾಬ್ದಾರಿಯನ್ನು ಲಯನ್ಸ್ ಸಂಸ್ಥೆ ಹೊಂದಿದೆ ಎಂದು ಹೇಳಿದರು.

ಚಿಕ್ಕಮಗಳೂರು ಲಯನ್ಸ್ ಕ್ಲಬ್ ಆರಂಭವಾಗಿ ೫೦ ವರ್ಷಗಳು ಈ ವರ್ಷಕ್ಕೆ ತುಂಬಲಿದ್ದು, ಈ ಹಿನ್ನೆಲೆಯಲ್ಲಿ ಲಯನ್ಸ್ ಸುವರ್ಣ ಮಹೋತ್ಸವ ಆಚರಣೆ ಸಮಿತಿ ಅಧ್ಯಕ್ಷರಾದ ಡಾ.ಜೆ.ಪಿ. ಕೃಷ್ಣೇಗೌಡ ಅವರ ಅಧ್ಯಕ್ಷತೆಯಲ್ಲಿ ಲಯನ್ಸ್ ಸೇವಾ ಭವನದ ಸುವರ್ಣ ಮಹೋತ್ಸವ ಕಟ್ಟಡ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರಾಗೃಹದ ಅಧೀಕ್ಷಕ ಎಸ್.ಎಸ್. ಮೇಟಿ ಮಾತನಾಡಿ ಪ್ರತಿಯೊಬ್ಬ ರಕ್ತದಾನಿಯು ಕೂಡ ಜೀವ ರಕ್ಷಕನಾಗಿದ್ದು, ರಕ್ತದಾನದ ಮಹತ್ವವನ್ನು ಎಲ್ಲರೂ ಅರಿಯಬೇಕು. ಬಂಧಿಖಾನೆಯಲ್ಲಿರುವ ಖೈದಿಗಳು ಸಹ ಇಲ್ಲಿಂದ ಬಿಡುಗಡೆಯಾದ ನಂತರ ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡುವುದು ಒಂದು ಅದ್ಬುತ ಸೇವೆಯಾಗಿದ್ದು, ಬಂಧಿಖಾನೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಚಿಕ್ಕಮಗಳೂರು ಲಯನ್ಸ್ ಸಂಸ್ಥೆ ರಕ್ತದಾನದ ಮಹತ್ವ ತಿಳಿಯಲು ಅವಕಾಶ ಕಲ್ಪಿಸಿದೆ ಎಂದು ಎಂದರು.

ಮಲ್ಲೇಗೌಡ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಮುರುಳೀಧರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ೧೮ ವರ್ಷ ಮೇಲ್ಪಟ್ಟ ವಯೋಮಿತಿಯಲ್ಲಿರುವ ಆರೋಗ್ಯವಂತರು ರಕ್ತದಾನ ಮಾಡಬಹುದಾಗಿದ್ದು, ರಕ್ತದಾನ ಮಾಡುವುದರಿಂದ ನಿಮ್ಮ ಆರೋಗ್ಯದ ಜೊತೆ ಹೃದಯಾಘಾತದಂತಹ ಕಾಯಿಲೆಗಳನ್ನು ನಿಯಂತ್ರಿಸಬಹುದೆಂದು ತಿಳಿಸಿದರು.

ಪ್ರತಿ ೬ ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದಾನ ದಾನಗಳಲ್ಲಿ ಅತ್ಯಂತ ಶ್ರೇಷ್ಠದಾನವಾಗಿರುವ ರಕ್ತದಾನ ಮಾಡುವುದರಿಂದ ಸಾವಿನಂಚಿನಲ್ಲಿರುವ ರೋಗಿಗಳ ಪ್ರಾಣಗಳನ್ನು ಉಳಿಸಬಹುದಾಗಿದೆ ಎಂದು ಹೇಳಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಟಿ. ನಾರಾಯಣಸ್ವಾಮಿ, ಲಯನ್ಸ್ ಜೋನಲ್ ಕೋ-ಆರ್ಡಿನೇಟರ್ ಬಿ.ಎನ್. ವೆಂಕಟೇಶ್, ಲಯನ್ಸ್ ಕ್ಲಬ್‌ನ ಪೂರ್ವ ಅಧ್ಯಕ್ಷ ಎಸ್.ಆರ್. ವೈದ್ಯ, ಬಂಧಿಖಾನೆಯ ಸಹಾಯಕ ಬಂಧಿಖಾನೆ ಅಧೀಕ್ಷಕ ದಯಾನಂದ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಬಂಧಿಖಾನೆಯ ಸಿಬ್ಬಂದಿಗಳಾದ ಬಸವರಾಜಪ್ಪ ಸ್ವಾಗತಿಸಿ, ಶಿಕ್ಷಕ ರಾಜ್‌ಕುಮಾರ್ ವಂದಿಸಿದರು. ಜಿಲ್ಲಾ ಬಂಧಿಖಾನೆ ಅಧೀಕ್ಷಕ ಎಸ್.ಎಸ್. ಮೇಟಿ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ರಮೇಶ್ ಸೇರಿದಂತೆ ಬಂಧಿಖಾನೆಯ ಸಿಬ್ಬಂದಿವರ್ಗ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

Target 500 units of blood collection by Lions