ಚಿಕ್ಕಮಗಳೂರು:  ಜಿಲ್ಲೆಯ ಸಮಗ್ರ ಮಾಹಿತಿ ಹಾಗೂ ಪ್ರಾಚೀನ ದೇವಾಲಯಗಳ ಬಗ್ಗೆ ಸಂಪೂರ್ಣ ವಿವರವನ್ನೊಳಗೊಂಡ ’ಚಿಕ್ಕಮಗಳೂರು ನೆಲೆಬೆಲೆ-೨’ ಪುಸ್ತಕವನ್ನು ಓದುವ ಮೂಲಕ ಜಿಲ್ಲೆಯ ಇತಿಹಾಸ ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.

ಅವರು ಇಂದು ಕಲ್ಯಾಣ ನಗರದ ಬಸವತತ್ವ ಪೀಠದಲ್ಲಿ ಶಿವಚೈತನ್ಯ ಕಿರಣ ಪ್ರಕಾಶನ ಹೊರತಂದ ಮಂಜುಳಾ ಹುಲ್ಲಹಳ್ಳಿ ಬರೆದಿರುವ ’ಚಿಕ್ಕಮಗಳೂರು ನೆಲೆಬೆಲೆ-೨’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.

ಚಿಕ್ಕಮಗಳೂರು-ಹಿರೇಮಗಳೂರು ಹೆಸರು ಹೇಗೆ ಬಂತು ಎಂಬ ಬಗ್ಗೆ ದಾಖಲೆ ಸಹಿತ ಈ ಪುಸ್ತಕದಲ್ಲಿ ವಿವರಿಸಿದ್ದಾರೆ ಎಂದು ಶ್ಲಾಘಿಸಿದರು.

ಚಿಕ್ಕಮಗಳೂರು ನಗರದಲ್ಲಿ ಮೂಲ ಕೋಟೆ ಮಾತ್ರ ಇತ್ತು. ಬಸವನಹಳ್ಳಿ, ದಂಟರಮಕ್ಕಿ, ಉಪ್ಪಳ್ಳಿಗೆ ಪ್ರತ್ಯೇಕ ಸರ್ವೇ ನಂ ಇದ್ದು, ಆರ್‌ಟಿಸಿಯಲ್ಲಿ ಈ ಗ್ರಾಮಗಳ ಹೆಸರು ಉಲ್ಲೇಖವಾಗಿವೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ೧೯೩೬ ರಿಂದ ಈಚೆಗೆ ಇರುವ ಮಾಹಿತಿ ಪ್ರಕಾರ ಶೃಂಗೇರಿ ಶಾರದಾ ದೇವಾಲಯ, ಅಂಗಡಿ, ಮರ್ಲೆ ಈ ಪ್ರವಾಸಿ ತಾಣಗಳ ಬಗ್ಗೆ ಇತಿಹಾಸ ಬರೆದಿದ್ದು, ಜಿಲ್ಲೆಯ ಎಲ್ಲಾ ಪ್ರೇಕ್ಷಣೀಯ ಸ್ಥಳಗಳ ಸಮಗ್ರ ಮಾಹಿತಿ ಈ ಪುಸ್ತಕದಲ್ಲಿ ಒದಗಿಸಲಾಗಿದೆ ಎಂದರು.

ಡಾ. ಮಂಜುಳಾ ಹುಲ್ಲಹಳ್ಳಿ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಪಿಹೆಚ್‌ಡಿ ಮಾಡುವಾಗ ಚಿಕ್ಕಮಗಳೂರು ಮೂಲದ ಹೆಚ್.ಎಂ ನಾಗರಾಜ್ ರಾವ್ ಅವರು ಕುವೆಂಪು ವಿವಿಯಲ್ಲಿದ್ದಾಗ ಅವರೊಂದಿಗೆ ಕೆಲಸ ಮಾಡುತ್ತಲೇ ಒಡನಾಟ ಹಂಚಿಕೊಂಡು ಚಿಕ್ಕಮಗಳೂರು ಜಿಲ್ಲೆ, ನಂಜನಗೂಡು ಇತಿಹಾಸದ ಬಗ್ಗೆ ಅಧ್ಯಯನ ಮಾಡಿ, ಪುಸ್ತಕ ಬರೆದಿರುವುದು ವಿಶೇಷ ಎಂದು ಹೇಳಿದರು.

ಈ ರೀತಿ ವಿವಿಧ ೧೨ ಬಗೆಯ ಪುಸ್ತಕಗಳನ್ನು ಮಂಜುಳಾ ಬರೆದಿದ್ದು, ಬಿಡುವಾದಾಗ ಇವರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಕರೆ ನೀಡಿದ ಅವರು ಈ ಪುಸ್ತಕಗಳನ್ನು ಸರ್ಕಾರ ಖರೀದಿಸಿ ಎಲ್ಲರಿಗೂ ತಲುಪುವಂತೆ ಮಾಡಲು ಪತ್ರ ಬರೆಯುವುದಾಗಿ ಭರವಸೆ ನೀಡಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಸವತತ್ವ ಪೀಠದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳು ವಹಿಸಿದ್ದರು. ಪುಸ್ತಕದ ಕರ್ತೃ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಮಂಜುಳಾ ಹುಲ್ಲಹಳ್ಳಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಕಸಾಪ ಅಧ್ಯಕ್ಷ ಸೋಮಶೇಖರ್, ಸಾಹಿತಿ ಬಿ.ತಿಪ್ಪೇರುದ್ರಪ್ಪ, ಶಿವಪ್ರಕಾಶ್, ದೀಪಕ್ ದೊಡ್ಡಯ್ಯ ಮತ್ತಿತರರು ಉಪಸ್ಥಿತರಿದ್ದರು.

The book ‘Chikkamagaluru Nelebele-2’ written by Manjula Hullahalli was released