ಚಿಕ್ಕಮಗಳೂರು: ಗುರು ದತ್ತಾತ್ರೇಯಪೀಠ ಬಾಬಾಬುಡನ್ ಗಿರಿಯಲ್ಲಿ ರಾಮ ತಾರಕ ಹೋಮ ನಡೆಸಲು ಜಿಲ್ಲಾಡಳಿತ ಅನುಮತಿ ನೀಡದ ಕಾರಣಕ್ಕೆ ವಿಶ್ವಹಿಂದೂ ಪರಿಷತ್-ಬಜರಂಗದಳದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಡಿಸಿ ಕಚೇರಿ ಬಾಗಿಲಲ್ಲೇ ಹೋಮದ ಕುಂಡ ನಿರ್ಮಿಸಿ ಸಾಂಕೇತಿಕವಾಗಿ ಹೋಮ ನೆರವೇರಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರ, ಜಿಲ್ಲಾಡಳಿತ ವಿರುದ್ಧ ಘೋಷಣೆಗಳನ್ನು ಕೂಗಿದರು. ಒಂದು ಹಂತದಲ್ಲಿ ಜಿಲ್ಲಾಧಿಕಾರಿ ಕಚೇರಿ ನುಗ್ಗಲು ಯತ್ನಸಿದ ಸಂದರ್ಭದಲ್ಲಿ ಪೊಲೀಸರು ಅವರೆಲ್ಲರನ್ನೂ ಬಂಧಿಸಿದರು.

ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ದತ್ತಪೀಠಕ್ಕೆ ತೆರಳಿದ್ದ ವಿಶ್ವಹಿಂದೂ ಪರಿಷತ್-ಬಜರಂಗದಳದ ಕಾರ್ಯಕರ್ತರು ಅಲ್ಲಿ ರಾಮ ತಾರಕ ಹೋಮ ನಡೆಸಲು ಉದ್ದೇಶಿಸಿದ್ದರು. ಪೀಠದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಆವರಣದ ಗೇಟ್‌ಗೆ ಪೊಲೀಸರು ಬೀಗ ಹಾಕಿ ಹೋಮ ನಡೆಸಲು ಅವಕಾಶವಿಲ್ಲ ಎಂದು ತಡೆದರು.

ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಅಲ್ಲಿಂದ ನೇರವಾಗಿ ನಗರಕ್ಕೆ ಆಗಮಿಸಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಬಜರಂಗದಳದ ರಂಗನಾಥ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೊಟ್ಯಾನ್ ಇತರರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.

ಇಟ್ಟಿಗೆಗಳಿಂದ ಹೋಮದ ಕುಂಡ ನಿರ್ಮಿಸಿ ತುಪ್ಪ, ಎಣ್ಣೆ, ಫಲ ಪುಷ್ಪಗಳ್ನು ಬಳಸಿ, ಸಾಂಕೇತಿಕವಾಗಿ ಹೋಮ ನಡೆಸಿದರು. ರಾಮ ನಾಮ ಕೀರ್ತನೆ, ಭಜನೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿ ಸೆ.ಎನ್.ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಅವರು ಸಮಾಲೋಚನೆ ನಡೆಸಿದರು. ಸ್ವಲ್ಪ ಸಮಯದ ನಂತರ ಪ್ರತಿಭಟನಾಕಾರರನ್ನು ಭೇಟಿ ಮಾಡಿದ ಎಸ್ಪಿ ದತ್ತಪೀಠದಲ್ಲಿ ಅರ್ಚಕರುಗಳಿಂದ ಪೂಜೆ ನಡೆಯುತ್ತಿದೆ. ಅದನ್ನು ಹೊರತುಪಡಿಸಿ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಇದರಿಂದ ಆಕ್ರೋಶ ಭರಿತರಾದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ರಾಮನ ವಿರೋಧಿಗಳು, ಹಿಂದೂ ವಿರೋಧಿಗಳು ಎಂದು ಘೋಷಣೆ ಕೂಗಿದರು. ದತ್ತಪೀಠ ಮುಜರಾಯಿ ಇಲಾಖೆಗೆ ಸೇರಿದ್ದು ಅಲ್ಲಿ ಹೋಮ ನಡೆಸಲು ತಡೆ ಯಾಕೆ ಎಂದು ಪ್ರಶ್ನಿಸಿದರು.

ಅಲ್ಲಿಂದಲೇ ದತ್ತಪೀಠ ಚಲೋ ಕಾರ್ಯಕ್ರಮಕ್ಕೆ ಮುಂದಾದರು. ಎಸ್ಪಿ ಅವರ ನೇತೃತ್ವದಲ್ಲೇ ಸಿಬ್ಬಂದಿಗಳು ಅವರನ್ನು ತಡೆಯುವ ಪ್ರಯತ್ನ ನಡೆಸುವಾಗಲೇ ಇನ್ನೊಂದು ಗುಂಪು ಡಿಸಿ ಕಚೇರಿ ನುಗ್ಗಲು ಯತ್ನಿಸಿದರು. ಈ ವೇಳೆ ಗೊಂದಲ, ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಅವರಲ್ಲರನ್ನೂ ಪೊಲೀಸರು ಬಂಧಿಸಿದರು.

ಪ್ರತಿಭಟನಾಕಾರರನ್ನು ರಾಮನಹಳ್ಳಿಯ ಡಿಎಆರ್‌ಗೆ ಕರದೊಯ್ಯುವಾಗ ವಿಚಾರ ತಿಳಿದ ಜಿಲ್ಲಾ ಬಿಜೆಪಿ ನಿಯೋಜಿತ ಅಧ್ಯಕ್ಷ ದೇವರಾಜ ಶೆಟ್ಟಿ ಮತ್ತಿತರರ ಮತ್ತೊಂದು ಗುಂಪು ತೊಗರಿಹಂಕಲ್ ಸರ್ಕಲ್ ಬಳಿ ಪೊಲೀಸ್ ವಾಹನ ತಡೆದು ಪ್ರತಿಭಟನಾಕಾರರ ಬಿಡುಗಡೆಗೆ ಒತ್ತಾಯಿಸಿದರು.

ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹರಸಾಹಸ ಪಟ್ಟು ಪ್ರತಿಭಟನಾಕಾರರನ್ನು ಬಂಧಿಸಿ ಟ್ರಾಫಿಕ್ ಸುಗಮಗೊಳಿಸಿದರು.

ಒಟ್ಟಾರೆ ಪ್ರತಿಭಟನೆಯಿಂದಾಗಿ ನಗರದಲ್ಲಿ ಮೂರ್‍ನಾಲ್ಕು ಗಂಟೆ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಯೋಗೀಶ್ ರಾಜ್ ಅರಸ್, ಜೀವನ್, ಸುನೀಲ್, ಸುಮಂತ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

The Sangh Parivar protested by laying siege to the District Collector’s office