ಚಿಕ್ಕಮಗಳೂರು: ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ರಾಜ್ಯ ಸರ್ಕಾರ ಅನಾವಶ್ಯಕವಾಗಿ ರಾಜಕೀಯಕರಣಗೊಳಿಸಿ ಯಾತ್ರೆ ಯಶಸ್ಸಿಗೆ ತೊಡಕುಂಟುಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ರಾಜ್ಯದ ಕೃಷಿ ಇಲಾಖೆ ಕಾರ್ಯದರ್ಶಿ ಈ ಯಾತ್ರೆಯ ನೋಡಲ್ ಅಧಿಕಾರಿ ಆಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಇದರ ನೇತೃತ್ವ ವಹಿಸಬೇಕಿತ್ತು. ಇದಕ್ಕಾಗಿ ಡಿಸಿ, ಸಿಇಓ ಮತ್ತು ಪಿಡಿಓಗಳಿಗೆ ತರಬೇತಿಯನ್ನೂ ನೀಡಲಾಗಿತ್ತು. ಆದರೆ ಡಿಸೆಂಬರ್ ೧೪ ರ ರಾತ್ರಿ ನಮ್ಮ ರಾಜ್ಯದ ಮುಖ್ಯಮಂತ್ರಿ ಇದನ್ನು ರಾಜಕೀಯಕರಣಗೊಳಿಸಿದರು ಎಂದು ದೂರಿದರು.

ಮುಖ್ಯಮಂತ್ರಿಗಳು ಎಲ್ಲಾ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಇದರಲ್ಲಿ ಯಾರೂ ಭಾಗವಹಿಸಬಾರದು. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ಡಿಸಿ, ಸಿಇಓ ಸೇರಿ ಅಧಿಕಾರಿಗಳ ತಂಡ ಈ ಯಾತ್ರೆಯಲ್ಲಿ ಭಾಗವಹಿಸುತ್ತಿಲ್ಲ ಎಂದರು.

ಈ ಹಿನ್ನೆಲೆಯಲ್ಲಿ ಅದೇದಿನ ರಾತ್ರಿ ಪ್ರಧಾನಿಗಳು ಲೀಡ್ ಬ್ಯಾಂಕ್‌ನ ಮ್ಯಾನೇಜರ್‌ಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದಾರೆ. ರಾಜ್ಯಾದ್ಯಂತ ಇದನ್ನು ಅವರೇ ನಡೆಸುತ್ತಾರೆ. ಆದರೆ ಬ್ಯಾಂಕ್ ಅಧಿಕಾರಿಗಳಿಗೆ ಜನ ಸಂಪರ್ಕದ ಕೊರತೆ ಇರುತ್ತದೆ. ಈ ಕಾರಣಕ್ಕೆ ಆರಂಭಿಕ ದಿನಗಳಲ್ಲಿ ಸ್ವಲ್ಪ ಸಮಸ್ಯೆ ಆಯ್ತು. ಆದರೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಗ್ಯಾಸ್ ಏಜೆನ್ಸಿಗಳು, ನಮ್ಮ ಕಾರ್ಯಕರ್ತರ ತಂಡ, ಚುನಾಯಿತ ಪ್ರತಿನಿಧಿಗಳು, ಮುಖಂಡರು ಸೇರಿ ಈ ಕಾರ್ಯಕ್ರಮ ಯಶಸ್ಸುಗೊಳಿಸಲು ತೀರ್ಮಾನಿಸಿದ್ದಾರೆ ಎಂದರು.

ಈ ಯಾತ್ರೆ ರಾಜಕೀಯ ಉದ್ದೇಶದ್ದಲ್ಲ. ಕೇಂದ್ರ ಸರ್ಕಾರದ ಯೋಜನೆ, ಅಭಿವೃದ್ಧಿಯನ್ನು ತಿಳಿಸುವಂತಹದ್ದು, ಯಾರಿಗಾದರೂ ಯೋಜನೆ ತಲುಪಿಲ್ಲವಾದರೆ ಅಲ್ಲೇ ಅರ್ಜಿ ಸ್ವೀಕರಿಸಬೇಕು ಎಂದು ಹೇಳಿದ್ದಾರೆ. ರಾಜ್ಯಸಕಾರದ ಅಧಿಕಾರಿಗಳು ಬಾರದ ಕಾರಣ ಹಲವು ಕಡೆಗಳಲ್ಲಿ ಇದು ಸಾಧ್ಯವಾಗುತ್ತಿಲ್ಲವಾದರೂ ನಾವು ಪ್ರಾಮಾಣಿಕವಾಗಿ ಇದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಜನ ಇದನ್ನು ಯಶಸ್ಸುಗೊಳಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.

ರಾಜ್ಯದ ಚಾಮರಾಜನಗರ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೇಂದ್ರ ಸಚಿವರಾದ ವರ್ಮ ಅವರು ಕೊಪ್ಪಕ್ಕೆ ಬಂದು ಇದರ ಉದ್ಘಾಟನೆಯನ್ನೂ ಮಾಡಿದ್ದರು. ೨೦೪೭ ರ ಇಸವಿ ವೇಳಗೆ ಭಾರತ ಆತ್ಮ ನಿರ್ಭರ ಭಾರತ ಆಗಬೇಕು ಎನ್ನುವುದು ಪ್ರಧಾನಿಗಳ ಸಂಕಲ್ಪ ಆಗಿದೆ. ಈ ಕೆಲಸ ಕೇವಲ ಸರ್ಕಾರದ್ದು ಮಾತ್ರವಲ್ಲ. ಜನರೂ ಇದರಲ್ಲಿ ಭಾಗಿಯಾಗಬೇಕು. ಇದಕ್ಕಾಗಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಪ್ರಾರಂಭವಾಗಿದೆ ಎಂದರು.

The state government unnecessarily politicized the Bharat Sankalpa Yatra