ಚಿಕ್ಕಮಗಳೂರು: ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಮುಂಗಾರು ಚುರುಕುಗೊಂಡಿದ್ದು, ಬಿರುಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಮೂಡಿಗೆರೆ, ಕೊಪ್ಪ, ಕಳಸ, ಎನ್.ಆರ್ ಪುರ. ಶೃಂಗೇರಿ ತಾಲ್ಲೂಕಿನಲ್ಲಿ ಇಂದು ಮುಂಜಾನೆಯಿಂದ ಭಾರಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ರಭಸದಿಂದ ಬೀಸುತ್ತಿರುವ ಗಾಳಿಯೊಂದಿಗೆ ಭಾರಿ ಮಳೆಯಾಗುತ್ತಿದ್ದು ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್‌ನಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಇನ್ನು ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮುಗರಳ್ಳಿ ಗ್ರಾಮದ ಬಳಿ ನೂತನವಾಗಿ ನಿರ್ಮಿಸಲಾಗಿದ್ದ ಸೇತುವೆ ತಡೆಗೋಡೆ ಕುಸಿಯುವ ಹಂತ ತಲುಪಿದ್ದು ಧಾರಾಕಾರ ಮಳೆಗೆ ರಸ್ತೆ ಬಿರುಕು ಬಿಟ್ಟಿದೆ.
ಮುಗರಳ್ಳಿ ಸೇರಿದಂತೆ ಸುತ್ತಲ ನಾಲ್ಕು ಗ್ರಾಮಗಳಿಗೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತಿದೆ ಇದೀಗ ಸೇತುವೆ ಅವೈಜ್ಞಾನಿಕ ಕಳಪೆ ಕಾಮಗಾರಿಯಿಂದಾಗಿ ಕುಸಿಯುವ ಹಂತ ತಲುಪಿದೆ ಇದರಿಂದಾಗಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಕೇವಲ ೪ ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಸೇತುವೆ ಸಂಪೂರ್ಣ ಕುಸಿದಿತ್ತು ಈ ಹಿನ್ನೆಲೆಯಲ್ಲಿ ಹಳೆಯ ಸೇತುವೆ ಬಳಿ ನೂತನ ಸೇತುವೆ ನಿರ್ಮಾಣ ಮಾಡಲಾಗಿದ್ದು ಇದೀಗ ಅದೂ ಕೂಡ ಕುಸಿಯುವ ಭೀತಿ ಎದುರಾಗಿದೆ.

Torrential rain with storm in the district disrupted life