ಚಿಕ್ಕಮಗಳೂರು:  ಸಮಾಜದ ಭದ್ರ ಬುನಾದಿಗೆ ಅಡಿಪಾಯವಾಗಿರುವ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಸದೃಢ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹಿರಿಯ ಸವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಎ.ಎಸ್ ಸೋಮ ಅಭಿಪ್ರಾಯಿಸಿದರು.

ಅವರು ಇಂದು ತಾಲ್ಲೂಕು ಪಂಚಾಯಿತಿ ಡಾ. ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಪ್ರೌಢ ಶಾಲಾ ಶಿಕ್ಷಕರು ಮತ್ತು ಆರೋಗ್ಯ ಶುಶ್ರೂಷಕಿಯರಿಗೆ ವಿವಿಧ ಕಾನೂನುಗಳ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಕಾನೂನು ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ, ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೊಂದು ಶಾಲೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳಲ್ಲಿ ಕಾನೂನಿನ ಅರಿವು ಅಗತ್ಯ. ಏಕೆಂದರೆ ಈ ಎರಡು ಇಲಾಖೆಗಳನ್ನು ಆಯ್ಕೆ ಮಾಡಿಕೊಳ್ಳುವ ಉದ್ದೇಶ ಮಕ್ಕಳಿಗೆ ತಂದೆ-ತಾಯಿಯನ್ನು ಬಿಟ್ಟರೆ ತಕ್ಷಣದ ಸ್ಥಾನದಲ್ಲಿ ನಿಲ್ಲುವವರು ಶಿಕ್ಷಕರು ಮತ್ತು ಆರೋಗ್ಯ ಇಲಾಖೆಯವರು ಎಂದು ಹೇಳಿದರು.

ಈ ಕಾರ್ಯದಲ್ಲಿ ಶಿಕ್ಷಕರು ಸ್ವಲ್ಪ ಎಡವಿದರೆ ಇಡೀ ಸಮಾಜದ ಭದ್ರ ಬುನಾದಿ ತಳಮಟ್ಟಕ್ಕೆ ಹೋಗುತ್ತದೆ, ಪ್ರತಿಯೊಬ್ಬ ಶಿಕ್ಷಕರು ನೈತಿಕ ಶಿಕ್ಷಣ ಬೆಂಬಲ ನೀಡುವಂತ ವ್ಯವಸ್ಥೆ ಸರಿಯಾಗಿದ್ದ ಸಂದರ್ಭದಲ್ಲಿ ಸಮಾಜದಲ್ಲಿ ನಡೆಯುವ ದಷ್ಕೃತ್ಯಗಳು, ದುಶ್ಚಟಗಳನ್ನು ಮಟ್ಟ ಹಾಕಲು ಸಾಧ್ಯ ಎಂದು ಎಚ್ಚರಿಸಿದರು.

ಶಿಕ್ಷಕರು ಕೇವಲ ವೃತ್ತಿಯನ್ನು ಜೀವನಕ್ಕಾಗಿ ಮಾಡದೆ ಮನಸ್ಸು ಪೂರ್ವಕವಾಗಿ, ಮನ ಸಾಕ್ಷಿಗನುಗುಣವಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿ ಜ್ಞಾನ ತುಂಬುವುದರ ಜೊತೆಗೆ ಕಾನೂನಿನ ಅರಿವು ಮೂಡಿಸುವ ಬಹುದೊಡ್ಡ ಜವಾಬ್ದಾರಿ ಇದೆ ಎಂದು ಹೇಳಿದರು.

ಸೇವಾ ಅವಧಿಯಲ್ಲಿ ಪುಣ್ಯದ ಕೆಲಸ ಎಂದು ಶಿಕ್ಷಕರು ಭಾವಿಸಿ, ಕರ್ತವ್ಯ ನಿರ್ವಹಿಸುವುದು ಮನಸಾಕ್ಷಿಗೆ ತೃಪ್ತಿಯಾಗಿರಬೇಕು, ಆ ನಿಟ್ಟಿನಲ್ಲಿ ಕೆಲಸ ಮಾಡಿದಾಗ ಮಾತ್ರ ಸಮಾಜದಲ್ಲಿ ನಡೆಯುವ ಅನಾಚಾರಗಳನ್ನು ತಡೆಯಲು ಸಾಧ್ಯ ಎಂದರು.

ಮಕ್ಕಳು ದೇಶದ ಸಂಪತ್ತು. ಪ್ರತಿಯೊಂದು ರಾಷ್ಟ್ರವೂ ಮಕ್ಕಳ ರಕ್ಷಣೆಗೆ ಸಾಕಷ್ಟು ಕಾನೂನುಗಳನ್ನು ಜಾರಿ ಮಾಡಿ, ನಿಯಮ ರೂಪಿಸಿದ್ದು ಈ ಹಿನ್ನೆಲೆಯಲ್ಲಿ ಭಾರತ ಮತ್ತು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣೆಗೆ ಪೂರಕವಾದ ಕಾನೂನುಗಳನ್ನು ಜಾರಿ ಮಾಡಿ ಮೊದಲ ಆದ್ಯತೆ ನೀಡಿದೆ ಎಂದು ಶ್ಲಾಘಿಸಿದರು.

ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯ ಈ ಕುರಿತು ಪದೇ ಪದೆ ನಿರ್ದೇಶನ ನೀಡುತ್ತಾ ಮಕ್ಕಳ ಬಗ್ಗೆ ಶಿಕ್ಷಕರು, ಪೋಷಕರ ನಡೆ ಹೇಗಿರಬೇಕೆಂದು ಸೂಚನೆ ನೀಡುತ್ತಿದೆ, ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ನಿರ್ದೇಶನ ನೀಡಿದೆ ಎಂದು ತಿಳಿಸಿದರು.

ಬಾಲ್ಯ ವಿವಾಹ, ಪೋಕ್ಸೋ ಕಾಯಿದೆ ಇನ್ನೂ ಮುಂತಾದ ಕಾನೂನುಗಳ ಬಗ್ಗೆ ಶಿಕ್ಷಕರು ಚೆನ್ನಾಗಿ ತಿಳಿದುಕೊಂಡಾಗ ಮಾತ್ರ ಬೇರೆಯವರಿಗೆ ಸಲಹೆ ನೀಡಿ ಅನಾಚಾರಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಕೆ.ಎಸ್ ಪ್ರಕಾಶ್ ಮಾತನಾಡಿ, ಮಕ್ಕಳ ರಕ್ಷಣೆಗೆ ಸಾಕಷ್ಟು ಕಾನೂನುಗಳಿದ್ದರೂ ಸಹ ಅಲ್ಲಲ್ಲಿ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹದಂತಹ ಪ್ರಕರಣಗಳು ನಡೆಯುತ್ತಿರುವುದು ಮಕ್ಕಳ ಹಕ್ಕುಗಳಿಗೆ ದಕ್ಕೆಯಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ಗ್ರಾಮೀಣ ಶಾಲೆ-ಆರೋಗ್ಯ ಇಲಾಖೆಯಲ್ಲಿ ತಳ ಮಟ್ಟದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳಿಗೆ ಕಾನೂನಿನ ಸಮಗ್ರ ಮಾಹಿತಿ ಇಲ್ಲದಿದ್ದರೂ ಸೂಕ್ಷ್ಮತೆ ಅತಿ ಮುಖ್ಯವಾಗಿರಬೇಕು. ಸಮಾಜದಲ್ಲಿ ಇಂತಹ ದುಷ್ಕೃತ್ಯಗಳು ನಡೆದಾಗ ಮೊದಲು ತಿಳಿಯುವುದೇ ಗ್ರಾಮೀಣ ಶಾಲೆಯ ಶಿಕ್ಷಕರಿಗೆ ಮತ್ತು ದಾದಿಯರಿಗೆ ಅದ್ದರಿಂದ ಎಚ್ಚರ ವಹಿಸಿ ಕರ್ತವ್ಯ ನಿರ್ವಹಿಸಿದಾಗ ಅಪರಾಧ ತಡೆಗೆ ಕ್ರಮ ವಹಿಸಬಹುದಾಗಿದೆ ಎಂದರು.

ಕಾನೂನುಗಳ ಸೂಕ್ಷ್ಮ ಪರಿಚಯವಿದ್ದಾಗ ಮಾತ್ರ ಇಂತಹ ಗಂಭೀರ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ನ್ಯಾಯಾಲಯದ ಸುತ್ತೋಲೆಗಳನ್ನು ಪಾಲಿಸುವ ಪರಿಪಾಠ ಅಗತ್ಯವಾಗಿದೆ ಎಂದರು.

ಪ್ರತಿ ಶಾಲೆಯಲ್ಲಿ ಮಕ್ಕಳ ಸುರಕ್ಷತಾ ಸಮಿತಿ ಕಡ್ಡಾಯವಾಗಿ ರಚಿಸಿರಬೇಕು ಅದರಲ್ಲಿ ಮುಖ್ಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಅಧ್ಯಕ್ಷರಾಗಿರುತ್ತಾರೆ, ಇಬ್ಬರು ಶಿಕ್ಷಕರಲ್ಲಿ ಒಬ್ಬರು ಮಹಿಳಾ ಶಿಕ್ಷಕರಿರುತ್ತಾರೆ, ಮೂವರು ಪೋಷಕರು, ಇಬ್ಬರು ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ, ಸದಸ್ಯರಾಗಿರುವ ಈ ಸಮಿತಿ ಪ್ರತೀ ತಿಂಗಳು ಸಭೆ ಸೇರಿ ಸುತ್ತಮುತ್ತ ನಡೆಯುವ ಘಟನೆಗಳ ಬಗ್ಗೆ ಚರ್ಚಿಸಿ, ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಇಂಪಾ, ಕಾರ್ಯ ನಿರ್ವಹಣಾಧಿಕಾರಿ ಹೆಚ್.ಕೆ ತಾರಾನಾಥ್, ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳ ರಕ್ಷಣಾ ಯೋಜನೆಯ ಸಂಯೋಜಕ ರಾಘವೇಂದ್ರ ಭಟ್ ಭಾಗವಹಿಸಿದ್ದರು, ಪ್ರಾರಂಭದಲ್ಲಿ ಅಭಿಲಾಷ್ ಸ್ವಾಗತಿಸಿದರು.

Training workshop on various laws for midwives