ಚಿಕ್ಕಮಗಳೂರು:  ನಗರ ಸಮೀಪದ ಅಲ್ಲಂಪುರ ಗ್ರಾಮದಲ್ಲಿ ಅನಧಿಕೃತ ರೆಸಾರ್ಟ್‌ವೊಂದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ, ತಾಲ್ಲೂಕು ಆಡಳಿತ ಸಿಬ್ಬಂದಿಗಳು ಭಾನುವಾರ ಬೀಗ ಹಾಕಿ ಬಂದ್ ಮಾಡಿಸಿದರು. ಸಿಡಿಎ ಅಧ್ಯಕ್ಷ ಸಿ.ಆನಂದ್, ಗ್ರಾಮ ಸಹಾಯಕ ಚೇತನ್ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಜಂಟೀ ಕಾರ್ಯಾಚರಣೆ ನಡೆಸಿ ೭ ಹೆವೆನ್ ಎಂಬ ರೆಸಾರ್ಟ್‌ನ್ನು ಬಂದ್ ಮಾಡಿಸಿದರು.

ಈ ವೇಳೆ ರೆಸಾರ್ಟ್ ಮಾಲೀಕರು ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತಾದರೂ ರೆಸಾರ್ಟ್‌ನ್ನು ಕೃಷಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಅಲ್ಲದೆ ಸೂಕ್ತ ಅನುಮತಿ ಪಡೆಯದೆ ಅನಧಿಕೃತವಾಗಿ ರೆಸಾರ್ಟ್ ನಡೆಸಲಾಗುತ್ತಿದೆ ಎನ್ನುವ ಕಾರಣ ನೀಡಿದ ಸಿಬ್ಬಂದಿ ರೆಸಾರ್ಟ್‌ನಲ್ಲಿ ತಂಗಿದ್ದ ಪ್ರವಾಸಿಗರು ಹಾಗೂ ಅಲ್ಲಿನ ಸಿಬ್ಬಂದಿಗಳನ್ನೆಲ್ಲಾ ಹೊರಕ್ಕೆ ಕಳಿಸಿ ಗೇಟ್‌ಗೆ ಬೀಗ ಹಾಕಿದರು.

ಈ ವೇಳೆ ಸಿಡಿಎ ಅಧ್ಯಕ್ಷ ಸಿ.ಆನಂದ್ ಮಾತನಾಡಿ, ಒಂದು ವರ್ಷದ ಹಿಂದೆಯೇ ಈ ರೆಸಾರ್ಟ್‌ನ್ನು ಬಂದ್ ಮಾಡಿಸಲಾಗಿತ್ತು. ಇದು ಇನ್ನೂ ಹಸಿರು ವಲಯದ ಜಾಗದಲ್ಲೇ ಇದೆ. ಈ ವರೆಗೆ ಅನ್ಯಕ್ರಾಂತ ಆಗಿಲ್ಲ. ಒಂದು ವರ್ಷದ ಹಿಂದೆ ಕಟ್ಟಡ ನಿರ್ಮಾಣ ಆಗುವಾಗಲೇ ನಾವು ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಕಾರಣಕ್ಕೆ ಕೆಲಸ ನಡೆಸಬಾರದು ಎಂದು ಎಚ್ಚರಿಕೆ ನೀಡಿದ್ದೆವು ಎಂದರು.

ಆದರೂ ಕದ್ದು ಮುಚ್ಚಿ ರಾತ್ರೋ ರಾತ್ರಿ ಕಾಮಗಾರಿ ನಡೆಸಿದ್ದಾರೆ. ಬೋರ್ಡ್ ಹಾಕಿದ ಕೂಡಲೇ ಒಂದು ತಿಂಗಳ ಹಿಂದೆ ಸಹ ನಾವು ಇಲ್ಲಿಗೆ ಬಂದು ರೆಸಾರ್ಟ್ ಮುಚ್ಚಿಸಿದ್ದೆವು. ಇದೀಗ ರೆಸಾರ್ಟ್ ಹಿಂಭಾಗದಲ್ಲಿರುವ ಬೇಲಿ ಬಳಿ ಮತ್ತೊಂದು ಗೇಟ್ ಅಳವಡಿಸಿ ಹಿಂಬದಿಯಿಂದ ರೆಸಾರ್ಟ್ ನಡೆಸಲಾಗುತ್ತಿದೆ. ಅನಧಿಕೃತವಾಗಿ ಕೊಠಡಿಗಳನ್ನು ಪ್ರವಾಸಿಗರಿಗೆ ನೀಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯರಿಂದ ದೂರು ಬಂದಿದೆ.

ಈ ಕಾರಣಕ್ಕೆ ತಕ್ಷಣ ಪೊಲೀಸರು ಹಾಗೂ ತಹಸೀಲ್ದಾರರಿಗೆ ದೂರು ನೀಡಿ ಸಿಡಿಎ ಆಯುಕ್ತರು ಮತ್ತು ಸಿಬ್ಬಂದಿ ಜೊತೆಗೆ ಬಂದು ಪರಿಶೀಲಿಸಿದಾಗ ಎಲ್ಲಾ ಕೊಠಡಿಗಳನ್ನೂ ಪ್ರವಾಸಿಗರಿಗೆ ಬಾಡಿಗೆ ನೀಡಿರುವುದು ಪತ್ತೆಯಾಗಿದೆ. ಕಾನೂನು ಉಲ್ಲಂಘಿಸಿ ರೆಸಾರ್ಟ್ ನಡೆಸುತ್ತಿರುವ ಇವರು ಇಲ್ಲಿಗೆ ಬರುವ ಪ್ರವಾಸಿಗರೂ ತೊಂದರೆ ಕೊಡುತ್ತಿದ್ದಾರೆ ಎಂದರು.

ಕಾನೂನು ಬದ್ಧವಾಗಿ ಅನುಮತಿ ಪಡೆದು ರೆಸಾರ್ಟ್ ನಡೆಸದೆ ಚಿಕ್ಕಮಗಳೂರಿಗೆ ಹಾಗೂ ಪ್ರಾಮಾಣಿಕವಾಗಿ ರೆಸಾರ್ಟ್ ನಡೆಸುವವರಿಗೆ ಕೆಟ್ಟ ಹೆಸರು ತರುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವ ಜೊತೆಗೆ ಕಟ್ಟಡವನ್ನು ಕೆಡವುವ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರನ್ನು ಸ್ವಾಗತಿಸಿ, ಒಳ್ಳೆತ ಆತಿಥ್ಯ ನೀಡೋಣ ಆದರೆ ಅದು ಅಧಿಕೃತವಾಗಿರಬೇಕು. ಪ್ರವಾಸಿಗರು ಸಹ ಹೆಮ್ಮೆ ಪಡುವಂತೆ ಮಾಡಬೇಕು. ಕಾನೂನು ವಿರುದ್ಧ ಯಾರು ಮಾಡಿದರೂ ಮುಲಾಜಿಲ್ಲದೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

Unauthorized resort locked