ಬೆಂಗಳೂರು: ವಿಧಾನ ಪರಿಷತ್ತಿನ ನಾಮ ನಿರ್ದೇಶನಕ್ಕೆ ರಾಜ್ಯ ನಾಯಕತ್ವ ಕಳುಹಿಸಿದ್ದ ಮೂರು ಹೆಸರುಗಳಿಗೆ ಹೈಕಮಾಂಡ್‌ ಒಪ್ಪಿಗೆ ನೀಡಿದ್ದು, ನಿರೀಕ್ಷೆಯಂತೆಯೇ ಹಿರಿಯ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಸ್ಥಾನ ಪಡೆದಿದ್ದಾರೆ.

ಸಾಕಷ್ಟು ಚರ್ಚೆಗಳ ನಂತರ ಶಿಕ್ಷಣ ಕ್ಷೇತ್ರದಿಂದ ಎಂ.ಆರ್‌.ಸೀತಾರಾಂ (ಒಬಿಸಿ) ಮತ್ತು ಕಲಾ ಕ್ಷೇತ್ರದಿಂದ ಉಮಾಶ್ರೀ (ಒಬಿಸಿ) ಹಾಗೂ ಸಮಾಜ ಸೇವಾ ಕ್ಷೇತ್ರದಿಂದ ಸುಧಾಮದಾಸ್‌ (ಎಸ್ಸಿ ಎಡಗೈ) ಅವರನ್ನು ನಾಮನಿರ್ದೇಶನ ಮಾಡಲು ಹೈಕಮಾಂಡ್‌ ಒಪ್ಪಿಗೆ ನೀಡಿದೆ ಎನ್ನಲಾಗಿದ್ದು, ಬಹುತೇಕ ಬುಧವಾರ ಈ ಮೂವರ ಹೆಸರನ್ನು ಮುಖ್ಯಮಂತ್ರಿಯವರು ರಾಜ್ಯಪಾಲರಿಗೆ ಶಿಫಾರಸು ಮಾಡಿ ಪತ್ರ ಬರೆಯಲಿದ್ದಾರೆ.

ವಿಧಾನಪರಿಷತ್‌ ನಾಮನಿರ್ದೇಶಿತ ಸದಸ್ಯ ಸ್ಥಾನಕ್ಕಾಗಿ ಕೇಂದ್ರದ ಮಾಜಿ ಸಚಿವ ರೆಹಮಾನ್‌ ಖಾನ್‌ ಪುತ್ರ ಮನ್ಸೂರ್‌ ಅಲಿಖಾನ್‌ ತೀವ್ರ ಪೈಪೋಟಿ ನಡೆಸಿದ್ದರು. ಆರಂಭದಲ್ಲಿ ಮನ್ಸೂರ್‌ ಅಲಿಖಾನ್‌ ಅವರ ಹೆಸರು ಅಂತಿಮವಾಗಿತ್ತು ಎಂದೇ ಹೇಳಲಾಗಿತ್ತು. ಆದರೆ, ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಮಹಿಳಾ ಸದಸ್ಯರು ಯಾರೂ ಇಲ್ಲ. ಹೀಗಾಗಿ ಉಮಾಶ್ರೀ ಆಯ್ಕೆ ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟುಹಿಡಿದದ್ದು ಮತ್ತು ನಿವೃತ್ತ ಐಆರ್‌ಎಸ್‌ ಅಧಿಕಾರಿ ಸುಧಾಮದಾಸ್‌ ಹೆಸರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಿಫಾರಸು ಮಾಡಿದ್ದರಿಂದ ಮನ್ಸೂರ್‌ ಅಲಿಖಾನ್‌ ಅವರ ಹೆಸರು ಕೈಬಿಟ್ಟು ಹೋಗಿದೆ.

ಮನ್ಸೂರ್‌ ಅಲಿಖಾನ್‌ ಪರವಾಗಿ ಮುಸ್ಲಿಂ ನಾಯಕರು ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

Veteran actress and former minister Umashree