ನಾವು ಅದೆಷ್ಟೋ ಹಣ್ಣು, ತರಕಾರಿಗಳನ್ನು ಸೇವಿಸಿ, ಅದರ ಸಿಪ್ಪೆ, ಬೀಜಗಳ ಉಪಯುಕ್ತ ಗುಣಗಳನ್ನು ತಿಳಿಯದೇ ಎಸೆಯುತ್ತೇವೆ. ನಾವಿಂದು ಅಂತಹುದೇ ಒಂದು ಪದಾರ್ಥದಿಂದ ರುಚಿಕರ ಹಾಗೂ ಆರೋಗ್ಯಕರ ಅಡುಗೆ ಮಾಡುವುದನ್ನು ಹೇಳಿಕೊಡುತ್ತೇವೆ. ನೀವು ಕಲ್ಲಂಗಡಿ ಹಣ್ಣನ್ನು ಸವಿದಿರುತ್ತೀರಿ. ಆದರೆ ಅದರ ಸಿಪ್ಪೆಯನ್ನು ಪ್ರತಿ ಬಾರಿ ಎಸೆದಿರುತ್ತೀರಿ ಅಲ್ವಾ? ಇದೇ ಸಿಪ್ಪೆಯನ್ನು ಬಳಸಿ ನಾವಿಂದು ರಾಯಿತಾ (Watermelon Rind Raita) ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ಮುಂದಿನಬಾರಿ ನೀವು ಕಲ್ಲಂಗಡಿ ಹಣ್ಣು ಸವಿದಾಗ ಅದರ ಸಿಪ್ಪೆಯಿಂದ ಮರೆಯದೇ ಈ ರೆಸಿಪಿ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:
ಕಲ್ಲಂಗಡಿ ಹಣ್ಣಿನ ಸಿಪ್ಪೆ – 1 ಕಪ್
ಮೊಸರು – 2 ಕಪ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ಕೊತ್ತಂಬರಿ ಪುಡಿ – ಕಾಲು ಟೀಸ್ಪೂನ್
ಅರಿಶಿನ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಎಣ್ಣೆ – 2 ಟೀಸ್ಪೂನ್
ಸಾಸಿವೆ – ಅರ್ಧ ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಹಿಂಗ್ – ಚಿಟಿಕೆ
ಕರಿಬೇವಿನ ಸೊಪ್ಪು – ಕೆಲವು
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2

ಮಾಡುವ ವಿಧಾನ:
* ಮೊದಲಿಗೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಶುಚಿಗೊಳಿಸಿ, ಅದರ ಹಸಿರು ಭಾಗವನ್ನು ಪೀಲರ್ ಸಹಾಯದಿಂದ ತೆಗೆದು ಕೇವಲ ಬಿಳಿ ಭಾಗವನ್ನು ಮಾತ್ರವೇ ತುರಿದು ಇಟ್ಟುಕೊಳ್ಳಿ.
* ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ ಸೇರಿಸಿ ಸಿಡಿಸಿ. ಬಳಿಕ ಕರಿಬೇವಿನ ಸೊಪ್ಪು ಹಾಗೂ ಹಸಿರು ಮೆಣಸಿನಕಾಯಿ ಹಾಕಿ 1 ನಿಮಿಷ ಹುರಿಯಿರಿ.
* ತುರಿದ ಕಲ್ಲಂಗಡಿ ಸಿಪ್ಪೆ, ಅರಿಶಿನ ಹಾಗೂ ಉಪ್ಪು ಸೇರಿಸಿ 1 ನಿಮಿಷ ಫ್ರೈ ಮಾಡಿ.
* ಈಗ ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಸೇರಿಸಿ, ಕಲ್ಲಂಗಡಿ ಸಿಪ್ಪೆ ಮೃದುವಾಗುವವರೆಗೆ 5 ನಿಮಿಷ ಮುಚ್ಚಿ ಬೇಯಿಸಿ.
* ಈಗ ಉರಿಯನ್ನು ಆಫ್ ಮಾಡಿ, ತಣ್ಣಗಾಗಲು ಬಿಡಿ.
* ಬಳಿಕ ಮೊಸರು, ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
* ಇದೀಗ ಕಲ್ಲಂಗಡಿ ಸಿಪ್ಪೆಯ ರಾಯಿತಾ ತಯಾರಾಗಿದ್ದು, ಅನ್ನ, ಚಪಾತಿಯೊಂದಿಗೆ ಸವಿಯಿರಿ.

Watermelon Peel Raita