ನವದೆಹಲಿ: ಇಲ್ಲಿಯವರೆಗೆ ಕೇಳರಿಯದ ಭಾರೀ ದೊಡ್ಡ ಮಟ್ಟದ ಡೇಟಾ ಸೋರಿಕೆ (Data Leak) ಪ್ರಕರಣ ಬೆಳಕಿಗೆ ಬಂದಿದೆ. ವಿಶ್ವದಾದ್ಯಂತ ಸುಮಾರು 50 ಕೋಟಿ ವಾಟ್ಸಪ್ (WhatsApp) ಬಳಕೆದಾರರ ಡೇಟಾ ಸೋರಿಕೆಯಾಗಿದ್ದು, ಅದನ್ನು ಮಾರಾಟಕ್ಕಿಡಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಸೈಬರ್ ನ್ಯೂಸ್ ವರದಿ ತಿಳಿಸಿದೆ.

ಜನಪ್ರಿಯ ಹ್ಯಾಕಿಂಗ್ ವೇದಿಕೆಯೊಂದು 50 ಕೋಟಿ ವಾಟ್ಸಪ್ ಬಳಕೆದಾರರ ದೂರವಾಣಿ ಸಂಖ್ಯೆಯನ್ನು ಮಾರಾಟಕ್ಕೆ ಇಟ್ಟಿದೆ. ಇದರಲ್ಲಿ 84 ದೇಶಗಳ ವಾಟ್ಸಪ್ ಬಳಕೆದಾರರ ಖಾಸಗಿ ಮಾಹಿತಿ ಒಳಗೊಂಡಿದೆ. ಈಜಿಪ್ಟ್, ಇಟಲಿ, ಫ್ರಾನ್ಸ್, ಬ್ರಿಟನ್, ರಷ್ಯಾ ಹಾಗೂ ಭಾರತವೂ ಸೇರಿದಂತೆ ಲಕ್ಷಾಂತರ ಬಳಕೆದಾರರ ಸಂಖ್ಯೆಗಳು ಇದರಲ್ಲಿ ಸೇರಿವೆ ಎನ್ನಲಾಗಿದೆ.

ವರದಿಗಳ ಪ್ರಕಾರ, 84 ದೇಶಗಳ ಪೈಕಿ ಈಜಿಪ್ಟ್‌ನ ಅತಿ ಹೆಚ್ಚು ಬಳಕೆದಾರರ ಮಾಹಿತಿ ಸೋರಿಕೆಯಾಗಿದ್ದು, 4.5 ಕೋಟಿ ಜನರ ಮಾಹಿತಿ ಇದರಲ್ಲಿ ಸೇರಿವೆ. ಇಟಲಿಯ 3.5 ಕೋಟಿ ಹಾಗೂ ಅಮೆರಿಕದ 3.2 ಕೋಟಿ ಜನರ ಮಾಹಿತಿ ಸೋರಿಕೆಯಾಗಿದೆ. ಭಾರತದ 60 ಲಕ್ಷ ಬಳಕೆದಾರರ ಮಾಹಿತಿಯೂ ಸೋರಿಕೆಯಾಗಿದೆ ಎಂಬುದನ್ನು ವರದಿ ತಿಳಿಸಿದೆ.

ವಾಟ್ಸಪ್ ಬಳಕೆದಾರರ ಮಾಹಿತಿಗಳನ್ನು ಮಾರಾಟಕ್ಕಿಟ್ಟಿರುವ ವ್ಯಕ್ತಿ ವಿವಿಧ ದೇಶಗಳ ಬಳಕೆದಾರರ ಡೇಟಾಗಳ ಬೆಲೆಯನ್ನೂ ನಿಗದಿಪಡಿಸಿದ್ದಾನೆ. ಅಮೆರಿಕದ ಬಳಕೆದಾರರ ಡೇಟಾಗಾಗಿ 5.61 ಲಕ್ಷ ರೂ., ಬ್ರಿಟನ್ ಬಳಕೆದಾರರ ಡೇಟಾಗೆ 1.61 ಲಕ್ಷ ರೂ. ಹಾಗೂ ಜರ್ಮನಿಯ ಬಳಕೆದಾರರ ಡೇಟಾಗಳಿಗಾಗಿ 2.04 ಲಕ್ಷ ರೂ. ನಿಗದಿಪಡಿಸಿದ್ದಾನೆ. ಆದರೆ ಹ್ಯಾಕರ್ (Hacker) ಈ ಡೇಟಾಗಳನ್ನು ಹೇಗೆ ಪಡೆದಿದ್ದಾನೆ ಎಂಬ ಬಗ್ಗೆ ಮಾಹಿತಿಯಿಲ್ಲ.

ಡೇಟಾ ಸೋರಿಕೆಯಿಂದಾಗಿ ಮೆಟಾ ಮಾಲೀಕತ್ವದ ಪ್ಲಾಟ್‌ಫಾರ್ಮ್ಗಳಿಗೆ ಹೊಡೆತ ಬಿದ್ದಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ, ಭಾರತದ 60 ಲಕ್ಷ ದಾಖಲೆಗಳು ಸೇರಿದಂತೆ 50 ಕೋಟಿ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಡೇಟಾ ಸೋರಿಕೆಯಾಗಿದೆ ಎಂದು ಆರೋಪಿಸಲಾಗಿದೆ. ಸೋರಿಕೆಯಾದ ಡೇಟಾಗಳಲ್ಲಿ ಫೋನ್ ನಂಬರ್ ಮತ್ತು ಇತರ ವಿವರಗಳು ಒಳಗೊಂಡಿತ್ತು ಎನ್ನಲಾಗಿದೆ.

WhatsApp user data leaked