ಭೋಪಾಲ್: ಮದ್ಯವ್ಯಸನಿ (Alcoholic) ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಹಾಗೂ ಮಕ್ಕಳು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

ಮಧ್ಯಪ್ರದೇಶದ ನರಸಿಂಗಪುರದಲ್ಲಿ (Narsinghpur) ಈ ಘಟನೆ ನಡೆದಿದ್ದು, 38 ವರ್ಷದ ಮಹಿಳೆ, ಆಕೆಯ 19 ವರ್ಷದ ಮಗ ಹಾಗೂ 16 ವರ್ಷದ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪತಿ ನಿತ್ಯ ಕುಡಿದು ಬಂದು ಹೆಂಡತಿ ಹಾಗೂ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ. ಈ ಕಿರುಕುಳದಿಂದ ಬೇಸತ್ತು ಜಿಲ್ಲಾ ಕೇಂದ್ರದಿಂದ 50 ಕಿಲೋಮೀಟರ್ ದೂರದಲ್ಲಿರುವ ಗದರ್ವಾರಾ (Gadarwara) ರೈಲು ನಿಲ್ದಾಣದಲ್ಲಿ ಮಕ್ಕಳ ಸಮೇತ ಪತ್ನಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶುಕ್ರವಾರ ರಾತ್ರಿ 10 ಗಂಟೆಯ ಸುಮಾರಿಗೆ ಮೂರೂ ಶವಗಳು ಹಳಿ ಮೇಲೆ ಬಿದ್ದಿರುವ ಬಗ್ಗೆ ಮಾಹಿತಿ ದೊರೆತಿದೆ ಎಂದು ಏರಿಯಾ ಉಪವಿಭಾಗಾಧಿಕಾರಿ ಶಶಿ ಪಾಠಕ್ ತಿಳಿಸಿದ್ದಾರೆ.

ತನಿಖೆ ವೇಳೆ ಮೃತ ಯುವಕನ ಪಾಕೆಟ್‌ನಲ್ಲಿ ಚೀಟಿಯೊಂದು ಪತ್ತೆಯಾಗಿದೆ. ತಂದೆ ಕುಡಿದು ಬಂದು ಸಾಕಷ್ಟು ತೊಂದರೆ ನೀಡುತ್ತಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿತ್ತು. ಈ ಕುರಿತು ತಂದೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Wife commits suicide with two children: