ಕುಣಿಗಲ್‌ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತನೀಡಿ, ತಾಲೂಕಿನ ಅಭಿವೃದ್ಧಿಗೆ ಅವಕಾಶ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತಯಾಚಿಸಿದರು.

ಪಟ್ಟಣದ ಜಿಕೆಬಿಎಂಎಸ್‌ ಮೈದಾನದಲ್ಲಿ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಮುಂದಿನ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಕ್ಷಣ ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರುಪಾಯಿ, ಇನ್ನೂರು ಯುನಿಟ್‌ ಉಚಿತ ವಿದ್ಯುತ್‌ ಹಾಗೂ ಕುಟುಂಬದ ಪ್ರತಿ ಸದಸ್ಯನಿಗೆ ಹತ್ತು ಕೆ.ಜಿ ಉಚಿತ ಅಕ್ಕಿ, ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಮೂರು ಸಾವಿರ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ನೀಡುತ್ತೇವೆ ಎಂದು ಭರವಸೆ ನೀಡಿದರು.

ಭ್ರಷ್ಟಾಚಾರ ರಹಿತ ಆಡಳಿತ ನಮ್ಮ ಗುರಿಯಾಗಿದೆ. ಇಂದಿನ ಬಿಜೆಪಿ ಸರ್ಕಾರದಲ್ಲಿ 40% ಭ್ರಷ್ಟಾಚಾರ, ಪಿಎಸ್‌ಐ ಹಗರಣ, ಪೆಟ್ರೊಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಸೇರಿದಂತೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದೆ, ಜನಸಾಮಾನ್ಯರ ಬದುಕು ಬೀದಿಗೆ ಬಿದ್ದಿದೆ ಎಂದು ಕಿಡಿಕಾರಿದರು.

ನಾನು ಜಲ ಸಂಪನ್ಮೂಲ ಸಚಿವನಾಗಿದ್ದ ಅವಧಿಯಲ್ಲಿ ಕುಣಿಗಲ್‌ ತಾಲೂಕಿನ ನೀರಾವರಿ ಯೋಜನೆಗೆಂದು 614 ಕೋಟಿ ಹಣ ಬಿಡುಗಡೆಯಾಗಿ ಟೆಂಡರ್‌ ಪ್ರಕ್ರಿಯೆ ಮುಗಿದ ನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇT್ಟತ್ವದ ಬಿಜೆಪಿ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಯೋಜನೆಯನ್ನು ರದ್ದುಗೊಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಯೋಜನೆಗೆ ಮತ್ತೆ ಚಾಲನೆ ನೀಡಲಾಗುವುದು ಎಂದರು.

ಕಾಂಗ್ರೆಸ್‌ ಮುಖಂಡ ಎಸ್‌.ವಿ.ಬಿ.ಸುರೇಶ್‌ ಡಿ.ಕೆ.ಶಿವಕುಮಾರ್‌ಗೆ ಬೆಳ್ಳಿಯ ಗದೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಮಂಜುಳ ಶೇಷಗಿರಿ ಬೆಂಬಲಿಗರ ಸಮ್ಮುಖದಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಪಟ್ಟಣದಲ್ಲಿ ಬೃಹತ್‌ ಬೈಕ್‌ ರಾರ‍ಯಲಿಯನ್ನು ಹಮ್ಮಿಕೊಂಡು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ಗೆ ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಾಜಿ ಸಚಿವೆ ಉಮಾಶ್ರೀ, ಶಾಸಕ ಡಾ.ರಂಗನಾಥ್‌, ಮಾಜಿ ಶಾಸಕ ಎಚ್‌.ನಿಂಗಪ್ಪ, ಜಿ.ಪಂ ಮಾಜಿ ಸದಸ್ಯೆ ಅನುಸೂಯಮ್ಮ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗಣ್ಣಗೌಡ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Win Congress for the development of Kunigal