ನವದೆಹಲಿ: ನೇಮಕಾತಿ ಮತ್ತು ಬಡ್ತಿ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸಂಬಂಧಿಸಿದ ನಿಯಮವನ್ನು ಬದಲಾವಣೆ ಮಾಡಿರುವ ಎಸ್‌ಬಿಐ, ಮೂರು ತಿಂಗಳ ಮೇಲ್ಪಟ್ಟ ಗರ್ಭಿಣಿಯರು ಕೆಲಸಕ್ಕೆ ಅರ್ಹರಲ್ಲ ಅಂತಹವರು ಹೆರಿಗೆ ನಂತರ ನಾಲ್ಕು ತಿಂಗಳು ಬಿಡುವು ಪಡೆದು ತದನಂತರ ಉದ್ಯೋಗಕ್ಕೆ ಮರುಸೇರ್ಪಡೆಯಾಗಬಹುದು ಎಂಬ ನಿಯಮವನ್ನು ಜಾರಿ ಮಾಡಿದೆ.

ಈ ಕುರಿತ ಸುತೋಲೆಯನ್ನು ಕಳೆದ ಡಿ.31ರಂದೇ ಹೊರಡಿಸಿದೆ. ಇದರ ಪ್ರಕಾರ,  ನೇಮಕಾತಿ ಸಂದರ್ಭದಲ್ಲಿ ಉದ್ಯೋಗಿಯು ಮೂರು ತಿಂಗಳ ಮೇಲ್ಪಟ್ಟ ಗರ್ಭಿಣಿಯಾಗಿದ್ದರೆ, ಅಂತಹವರು ತಾತ್ಕಾಲಿಕವಾಗಿ ಉದ್ಯೋಗಕ್ಕೆ ಅರ್ಹರಲ್ಲ. ಅವರು ಹೆರಿಗೆ ನಂತರ ನಾಲ್ಕು ತಿಂಗಳು ಬಿಡುವು ಪಡೆದು ಆಮೇಲೆ ಉದ್ಯೋಗಕ್ಕೆ ಮರು ಸೇರ್ಪಡೆಯಾಗಬಹುದು. ಬಡ್ತಿ ಸಂದರ್ಭದಲ್ಲಿ ಮೂರು ತಿಂಗಳ ಮೇಲ್ಪಟ್ಟ ಗರ್ಭಿಣಿಯರಾಗಿದ್ದರೆ ಅವರಿಗೂ ಇದೇ ನಿಯಮ ಅನ್ವಯ ಆಗುತ್ತದೆ. ಆದರೆ,  ಇದು 2022ರ ಏಪ್ರಿಲ್‌ 1ರಿಂದ ಜಾರಿಗೆ ಬರುತ್ತದೆ ಎಂದು ಹೇಳಿದೆ. ಈ ಮೊದಲು ಗರ್ಭಿಣಿಯರಿಗೆ ಇದ್ದ ಆರು ತಿಂಗಳ ತಾಯ್ತತದ ರಜೆಯನ್ನು ಎಸ್‌ಬಿಐ ಪರಿಷ್ಕರಿಸಿ ನಾಲ್ಕು ತಿಂಗಳಿಗೆ ಇಳಿಸಿದೆ.

ಈ ನಿಯಮಕ್ಕೆ ಅಖಿಲ ಭಾರತ ಎಸ್‌ಬಿಐ ಉದ್ಯೋಗಿಗಳ ಅಸೋಸಿಯೇಷನ್‌ ವಿರೋಧ ವ್ಯಕ್ತ ಪಡಿಸಿದ್ದು, ಗರ್ಭಿಣಿಯರ ದೇಹಸ್ಥಿತಿ ಬಹಳ ನಾಜೂಕಾಗಿರುತ್ತದೆ ಮತ್ತು ದಿನ ದಿನಕ್ಕೂ ಬದಲಾಗುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಅವರಿಗೆ ಹೆಚ್ಚಿನ ವಿಶ್ರಾಂತಿ ಬೇಕಿರುತ್ತದೆ. ಆದರೆ, ಎಸ್‌ಬಿಐ ರಜೆಯನ್ನು ಎರಡು ತಿಂಗಳು ಕಡಿಮೆ ಮಾಡಿರುವದಲ್ಲದೆ. ಗರ್ಭಿಣಿಯರು ಕೆಲಸಕ್ಕೆ ಅನರ್ಹರೆಂದು ಅವಮಾನ ಮಾಡಿದೆ ಎಂದು ದೂರಿದೆ.

ಮಹಿಳಾ ಆಯೋಗ ನೋಟಿಸ್‌: ಗರ್ಭಿಣಿಯರನ್ನು ತಾರತಮ್ಯದಿಂದ ನೋಡುವಂತಹ ನಿಯಮವನ್ನು ಎಸ್‌ಬಿಐ ಮಾಡಿದೆ. ಮಹಿಳಾ ವಿರೋಧಿ ನೀತಿಯಾಗಿರುವ ಇದು, ಕಾನೂನುಬಾಹಿರ. ತಾಯ್ತನದ ರಜೆ ಸೌಲಭ್ಯವನ್ನು ಯಾವುದೇ ಸಂಸ್ಥೆ ಕಾನೂನು ಬದ್ಧವಾಗಿ ನೀಡಬೇಕು ಎಂದು ಎಸ್‌ಬಿಐಗೆ ನೋಟಿಸ್ ನೀಡಿರುವ ದೆಹಲಿ ಮಹಿಳಾ ಆಯೋಗ ಹೇಳಿದೆ.

ಗರ್ಭಿಣಿಯರನ್ನು ಕೆಲಸಕ್ಕೆ ಅನರ್ಹರೆಂದು ಹೇಳಿರುವುದು ಅವಮಾನಕರ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಲ್‌ಟ್ವೀಟ್‌ ಮಾಡಿದ್ದಾರೆ.

 

ಇದನ್ನು ಓದಿ: ಗ್ರಾಹಕರು ಕೆವೈಸಿ ಪೂರೈಸದಿದ್ದರೆ ಬ್ಯಾಂಕ್‌ ಖಾತೆ ಸ್ಥಗಿತ?

ಇದನ್ನೂ ಓದಿ: Job Alert: ವಿವಿಧ ಬ್ಯಾಂಕ್‌ಗಳಲ್ಲಿ 4135 ಪ್ರೊಬೆಷನರಿ ಅಧಿಕಾರಿಗಳ ಹುದ್ದೆಗಳಿಗೆ IBPS ಅಧಿಸೂಚನೆ

(Women’s Panel Notice To SBI Over “Unfit” Pregnant Women Guidelines)