ಚಿಕ್ಕಮಗಳೂರು: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಎದುರಾಗಿರುವ ನೀರಿನ ಬಿಕ್ಕಟ್ಟಿಗೆ ಮಳೆನೀರಿನ ಕೊಯ್ಲಿನಲ್ಲಿ ಪರಿಹಾರ ಇದೆ ಎಂದು ಚಿಕ್ಕಮಗಳೂರು ರೈನಿ ರಿಸರ್ಚ್ ಮತ್ತು ಇನ್ನೋವೇಶನ್ ಫ್ಯಾಕ್ಟರಿ ಸಂಸ್ಥಾಪಕ ನಿರ್ದೇಶಕ ಸದಾನಂದ ಮೈಕಲ್ ಬ್ಯಾಪ್ಟಿಸ್ಟ್ ಹೇಳಿದರು.

ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮಳೆ ನೀರು ಕೊಯ್ಲು ಸಂಶೋಧನೆ ಮತ್ತು ಅಭಿವೃದ್ಧಿ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ತಾಲೂಕಿನ ಹಾದಿಹಳ್ಳಿಯಲ್ಲಿ ಸ್ಥಾಪಿಸಿರುವ ಸಂಶೋಧನಾ ಕೇಂದ್ರವು ಅತ್ಯಾಧುನಿಕ ಮಳೆಕೊಯ್ಲು, ಅಂತರ್ಜಲ ಪೂರಣ ತಂತ್ರಜ್ಞಾನ ಅಳವಡಿಸಿಕೊಂಡು ನೀರಿನ ಸಮಸ್ಯೆ ಎದುರಿಸುತ್ತಿರುವ ಅಕ್ಕಪಕ್ಕದ ಹಳ್ಳಿಗಳಿಗೆ ನೀರು ಪೂರೈಕೆ ಮಾಡುತ್ತಿದ್ದು ನೀರು ಸಂರಕ್ಷಣೆ ಕ್ಷೇತ್ರದಲ್ಲಿ ಮೌನಕ್ರಾಂತಿಯನ್ನೇ ಮಾಡುತ್ತಿದೆ ಎಂದರು.

ವಿಶ್ವದ ಹತ್ತಾರು ದೇಶಗಳ ಸಂಶೋಧಕರು, ವಿಜ್ಞಾನಿಗಳು ಇಲ್ಲಿಗೆ ಭೇಟಿ ನೀಡಿ ಜಾಗತಿಕ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ನೀರಿನ ಸಂರಕ್ಷಣೆಗಾಗಿ ನಾನಾ ತಂತ್ರಜ್ಞಾನ ಮತ್ತು ಪರಿಹಾರಗಳನ್ನು ಅಭಿವೃದ್ಧಿ ಪಡಸಲು ಕೈಜೋಡಿಸಿದ್ದಾರೆ. ದೇಶದಲ್ಲಿ ಇಂದು ನೀರಿಗೆ ಹಾಹಾಕಾರ ಉಂಟಾಗಿದೆ. ಅನೇಕ ನಗರಗಳಲ್ಲಿ ನೀರಿನ ಪೂರೈಕೆ ಮಾಡಲು ಹೆಣಗಾಡಲಾಗುತ್ತಿರುವ ಈ ಸಂದರ್ಭದಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಗೆ ಇದು ಸೂಕ್ತ ಕಾಲ. ಮಳೆನೀರು ಕೊಯ್ಲು ಮೂಲಕ ಅಂತರ್ಜಲ ಮರುಪೂರಣವೇ ನಮ್ಮೆಲ್ಲರ ಮುಂದಿರುವ ಏಕೈಕ ಮಾರ್ಗ ಎಂದು ಹೇಳಿದರು.

ಐದು ಎಕರೆ ಪ್ರದೇಶದಲ್ಲಿ ರೈನಿ ರಿಸರ್ಚ್ ಮತ್ತು ಇನ್ನೋವೇಶನ್ ಫ್ಯಾಕ್ಟರಿಯಲ್ಲಿ ಮಳೆನೀರು ಕೊಯ್ಲು ಮಾದರಿಗಳು, ತೆರೆದ ಬಾವಿಗಳು, ರಿಚಾರ್ಜಿಂಗ್ ಬೋರ್‌ವೆಲ್, ಫಿಲ್ಟರ್ ಸಂಗ್ರಹ ವ್ಯವಸ್ಥೆ, ಹೈಡ್ರಾಲಿಕ್ ಪರೀಕ್ಷಾ ಪ್ರಯೋಗಾಲಯ, ಶಿಕ್ಷಣ ಮತ್ತು ತರಬೇತಿ ಕೇಂದ್ರಗಳನ್ನು ಹೊಂದಿದೆ ಎಂದರು.

ವಿದ್ಯುತ್ ಅವಶ್ಯಕತೆ ಇಲ್ಲದೆ ವಿ-ವೈರ್ ಇಂಜೆಕ್ಷನ್ ವೆಲ್ ತಂತ್ರಜ್ಞಾನ ಬಳಸಿಕೊಂಡು ಅಂತರ್ಜಲ ಮರುಪೂರಣವನ್ನು ಗುರುತ್ವಾಕರ್ಷಣಾ ಶಕ್ತಿಯ ಆಧಾರದ ಮೇಲೆ ಮಾಡಲಾಗುತ್ತಿದೆ. ಈ ತಂತ್ರಜ್ಞಾನ ರ್ಘಾವ ಬಾಳಿಕೆ ಹೊಂದಿದೆ. ಸಣ್ಣ ಛಾವಣಿಗಳಿಂದ ಹಿಡಿದು ದೊಡ್ಡ ಪ್ರದೇಶಗಳಲ್ಲಿ ಮಳೆನೀರು ಕೊಯ್ಲು ಮಾಡಲು ಸರಳ ತಂತ್ರಜ್ಞಾನ ಪರಿಹಾರಗಳನ್ನು ಇಲ್ಲಿ ರೂಪಿಸಲಾಗಿದೆ ಎಂದು ಹೇಳಿದರು.

ಈ ಸಂಶೋಧನಾ ಕೇಂದ್ರದಲ್ಲಿ ಮಿನಿ ಕೆರೆ, ತೆರೆದ ಬಾವಿ ಮತ್ತಿತರೆ ಜಲ ಮರುಪೂರಣ ವಿಧಾನಗಳನ್ನು ಕಾಣಬಹುದು. ಈ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರದ ಇತ್ತೀಚಿನ ಅವಿಷ್ಕಾರ ಎಂದರೆ ಸುಲಭವಾಗಿ ಹೊಂದಿಕೊಳ್ಳುವ ಇಂಟರ್‌ಲಾಕಿಂಗ್ ಕಾಂಕ್ರಿಟ್ ರಿಂಗ್‌ಗಳು. ಈ ರಿಂಗ್‌ಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ರೀಚಾರ್ಜ್ ಫಿಟ್‌ಗಳ ನಿರ್ಮಾಣವನ್ನು ಸರಳವಾಗಿಸುತ್ತವೆ ಎಂದು ಹೇಳಿದರು.

ಪ್ರತಿ ಮನೆಗಳಲ್ಲಿ ಮಳೆನೀರು ಕೊಯ್ಲು ಮಾಡುವುದನ್ನು ಸರಕಾರ ಕಡ್ಡಾಯ ಮಾಡಿದೆ. ಆದರೆ, ಅದು ಅನುಷ್ಠಾನವಾಗದೆ ದಾಖಲೆಯಲ್ಲೇ ಉಳಿದಿದೆ. ಈ ಬಗ್ಗೆ ಗಮನಹರಿಸಬೇಕು. ಮಳೆ ನೀರು ಕೊಯ್ಲು ಘಟಕ ಸ್ಥಾಪನೆಗೆ ಈಗಿರುವ ಶೇ.೧೮ ರಷ್ಟು ಜಿಎಸ್‌ಟಿ ಯನ್ನು ಶೇ.೫ ಕ್ಕೆ ಇಳಿಸಬೇಕು. ಒಡಿಶಾ ಮಾದರಿಯಲ್ಲಿ ಮಳೆ ನೀರು ಅಳವಡಿಸುವ ಮನೆಗಳಿಗೆ ಶೇ.೩೦ ರಷ್ಟು ಸಬ್ಸಿಡಿ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸುತ್ತೇನೆ ಎಂದು ಹೇಳಿದರು. ಸಂಸ್ಥೆಯ ನಿರ್ದೇಶಕ ವಿಜಯ್‌ರಾಜ್ ಸಿಸೋಡಿಯಾ ಮಳೆನೀರು ಕೊಯ್ಲು ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

Workshop on Rainwater Harvesting Research and Development