ಮಹೀಂದ್ರಾ & ಮಹೀಂದ್ರಾ ಕಂಪನಿಯು (Mahindra & Mahindra) ಬಹುನಿರೀಕ್ಷಿತ ಎಕ್ಸ್‌ಯುವಿ 400 ಎಲೆಕ್ಟ್ರಿಕ್ ಎಸ್‍ಯುವಿಯನ್ನು (Electric xuv) ಅನಾವರಣಗೊಳಿಸಿದ್ದು, ಇದರ ರೇಂಜ್ ಬರೋಬ್ಬರಿ 456 ಕಿಲೋಮೀಟರ್. ಎಕ್ಸ್‌ಯುವಿ 400 ಜನವರಿ 2023ರಲ್ಲಿ ಬಿಡುಗಡೆಯಾಗಲಿದೆ.

ಎಕ್ಸ್‌ಯುವಿ 400 ಈಗಾಗಲೇ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ 300 ಕಾರನ್ನೇ (Car) ಹೋಲುತ್ತದೆ. ಡಿಸೆಂಬರ್ 2022ರಲ್ಲಿ ಈ ಹೊಸ ಎಲೆಕ್ಟ್ರಿಕ್ ಕಾರು ಟೆಸ್ಟ್ ಡ್ರೈವ್‍ಗೆ ಲಭ್ಯವಿರಲಿದ್ದು, ಜನವರಿ 2023ರಲ್ಲಿ ಬುಕ್ಕಿಂಗ್‌ ಓಪನ್ ಆಗಲಿದ್ದು, ಜನವರಿಯಲ್ಲಿ ಕಂಪನಿಯು ಕಾರಿನ ಬೆಲೆಯನ್ನು ತಿಳಿಸಲಿದೆ ಹಾಗೂ ಅದೇ ತಿಂಗಳಲ್ಲಿ ಡೆಲಿವರಿ ಕೂಡ ಆರಂಭಿಸಲಿದೆ.

ಎಕ್ಸ್‌ಯುವಿ 400 ಕಾರಿನಲ್ಲಿ 39.4kWh ಬ್ಯಾಟರಿ ಇದ್ದು, 150hp ಪವರ್ ಮತ್ತು 310Nm ಟಾರ್ಕ್ ಉತ್ಪಾದಿಸಲಿದೆ. 50kW DC ಫಾಸ್ಟ್ ಚಾರ್ಜರ್ ಮುಖಾಂತರ ಈ ಕಾರನ್ನು 0-80% ಚಾರ್ಜ್ ಮಾಡಲು ಕೇವಲ 50 ನಿಮಿಷಗಳು ಸಾಕು. 7.2 kW/32A ಚಾರ್ಜರ್ ಉಪಯೋಗಿಸಿದರೆ ಚಾರ್ಜ್ ಆಗಲು 6 ಗಂಟೆ 30 ನಿಮಿಷಗಳು ಬೇಕು. 3.3 kW/16A ಸ್ಟ್ಯಾಂಡರ್ಡ್ ಚಾರ್ಜರ್ ಮೂಲಕ 100% ಚಾರ್ಜ್ ಮಾಡಲು 13 ಗಂಟೆಗಳು ಬೇಕಾಗುತ್ತದೆ. ಈ ಬ್ಯಾಟರಿ IP67 ರೇಟಿಂಗ್ ಹೊಂದಿದೆ.

ಫನ್, ಫಾಸ್ಟ್ ಮತ್ತು ಫಿಯರ್‌ಲೆಸ್‌ ಎಂಬ ಮೂರು ಡ್ರೈವ್ ಮೋಡ್‍ಗಳು ಈ ಕಾರಿನಲ್ಲಿವೆ. ಎಕ್ಸ್‌ಯುವಿ 400 ಕಾರನ್ನು ಕೇವಲ ಒಂದೇ ಪೆಡಲ್ ಬಳಸಿ ಓಡಿಸಬಹುದು ಎಂದು ಮಹೀಂದ್ರಾ ಕಂಪನಿಯು ಹೇಳುತ್ತಿದೆ. ರೀಜೆನರೇಟಿವ್ ಬ್ರೇಕಿಂಗ್ ವ್ಯವಸ್ಥೆ ಅಷ್ಟು ಬಲಶಾಲಿಯಾಗಿರಲಿದೆ ಎಂಬುದು ತಿಳಿಯಬಹುದಾಗಿದೆ.

ಎಕ್ಸ್‌ಯುವಿ ಸ್ವಯಂಚಾಲಿತ ಹವಾನಿಯಂತ್ರಣ ವ್ಯವಸ್ಥೆ, ಸನ್‍ರೂಫ್, ಕ್ರೂಸ್ ಕಂಟ್ರೋಲ್, ಆ್ಯಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, 7 ಇಂಚಿನ ಟಚ್‍ಸ್ಕ್ರೀನ್ ಮತ್ತು ಕನೆಕ್ಟಡ್‌ ಕಾರ್ ವ್ಯವಸ್ಥೆಯನ್ನು ಎಕ್ಸ್‌ಯುವಿ 400 ಕಾರು ಒಳಗೊಂಡಿದೆ. 6 ಏರ್‌ ಬ್ಯಾಗ್‌, ನಾಲ್ಕೂ ಚಕ್ರಗಳಿಗೆ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಹೊಸ ಎಕ್ಸ್‌ಯುವಿ 400 ಕಾರು ಟಾಟಾ ನೆಕ್ಸಾನ್ ಇವಿ ಮತ್ತು ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಕಾರುಗಳೊಂದಿಗೆ ಪೈಪೋಟಿಗೆ ಇಳಿಯಲಿದೆ. ಇದರ ಬೆಲೆ 16 ಲಕ್ಷದಿಂದ 20 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.

 XUV 400 Electric SUV (Electric xuv)