ಚಿಕ್ಕಮಗಳೂರು: ಭಾರತ ಹವಾಮಾನ ಇಲಾಖೆ, ನವದೆಹಲಿ ಹಾಗೂ ರಾಜ್ಯ ಹವಾಮಾನ ಇಲಾಖೆ, ಬೆಂಗಳೂರು ನೀಡಿರುವ ಮುನ್ಸೂಚನೆಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮುಂದಿನ ೩-೪ ದಿನಗಳು ಮೋಡ ಕವಿದ ವಾತಾವರಣ ಹಾಗೂ ಸಾಧಾರಣದಿಂದ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಜಿಲ್ಲಾ ಕೃಷಿ ಹವಾಮಾನ ಘಟಕದ ಸಂಪರ್ಕ ಅಧಿಕಾರಿಗಳು ಹಾಗೂ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಕೃಷ್ಣಮೂರ್ತಿ ಎ.ಟಿ. ತಿಳಿಸಿದ್ದಾರೆ.

ತಾಲ್ಲೂಕುವಾರು ಮುನ್ಸೂಚನೆಯ ಪ್ರಕಾರ ಜಿಲ್ಲೆಯ ಮಲೆನಾಡು ತಾಲ್ಲೂಕುಗಳಾದ ಕೊಪ್ಪ, ಮೂಡಿಗೆರೆ, ಎನ್.ಆರ್. ಪುರ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲ್ಲೂಕುಗಳಿಗೆ ಮುಂದಿನ ೩-೪ ದಿನಗಳಲ್ಲಿ ಮೋಡ ಕವಿದ ವಾತಾವರಣ ಜೊತೆ ಗಾಳಿಯ ವೇಗ ಹೆಚ್ಚು ಇರುವ ಸಂಭವವಿದೆ ಹಾಗೂ ಸಾಧಾರಣದಿಂದ ಹೆಚ್ಚು ಮಳೆಯಾಗುವ ಸಂಭವವಿದೆ.

ತರೀಕೆರೆ ಹಾಗೂ ಕಡೂರು ತಾಲ್ಲೂಕುಗಳಿಗೆ ಮುಂದಿನ ೩-೪ ದಿನಗಳು ಮೋಡ ಕವಿದ ವಾತಾವರಣದ ಜೊತೆಗೆ ಸಾಧಾರಣ ಮಳೆಯಾಗುವ ಸಂಭವವಿದೆ ಹಾಗೂ ಇದರ ಜೊತೆ ಗಾಳಿಯ ವೇಗ ಹೆಚ್ಚು ಇರುವ ಸಂಭವವಿದೆ. ಆದ್ದರಿಂದ ಹೆಚ್ಚಾಗಿ ಮಳೆ ಬೀಳುವ ಪ್ರದೇಶದಲ್ಲಿ ಬಸಿಗಾಲುವೆ ವ್ಯವಸ್ಥೆ ಕಲ್ಪಿಸುವುದು ಸೂಕ್ತ ಹಾಗೂ ರೈತರು ಗೊಬ್ಬರ ಹಾಕುವುದು. ಬಿತ್ತನೆ ಚಟುವಟಿಕೆಗಳು ಹಾಗೂ ಕೃಷಿ ಚಟುವಟಿಕೆಗಳನ್ನು ಮುಂದಿನ ೩-೪ ದಿನಗಳವರೆಗೆ ಮುಂದೂಡುವುದು ಸೂಕ್ತ, ಮರಗಳ ಕೆಳಗೆ ಆಶ್ರಯ ಪಡೆದುಕೊಳ್ಳಬಾರದು, ಜಲಮೂಲಗಳಿಂದ ಹೊರಬರುವುದು ಹಾಗೂ ವಿದ್ಯುಚ್ಚಕ್ತಿಚಾಲಿತ ಯಂತ್ರಗಳಿಂದ ದೂರವಿರುವ ಸುರಕ್ಷಿತ ಕ್ರಮಗಳನ್ನು ಅನಿಸರಿಸಬೇಕು ಎಂದು ಜಿಲ್ಲಾ ಕೃಷಿ ಹವಾಮಾನ ಘಟಕದ ವಿಷಯ ತಜ್ಞರಾದ ಶ್ರೀಮತಿ ಶಬ್ನಂ ಪಿ.ಎಸ್. ತಿಳಿಸಿದ್ದಾರೆ.

ರೈತರು ಹಾಗೂ ಸಾರ್ವಜನಿಕರು ಒಂದು ಸ್ಥಳದ ನಿರ್ದಿಷ್ಟವಾದ ಹವಾಮಾನ ಮುನ್ಸೂಚನೆಗಳನ್ನು ತಿಳಿದುಕೊಳ್ಳಲು “ಮೌಸಮ್” ಆಪ್ ಅನ್ನು, ಹವಾಮಾನ ಮುನ್ಸೂಚನೆ ಹಾಗೂ ಬೆಳೆ ಸಲಹೆಗಳನ್ನು ತಿಳಿದುಕೊಳ್ಳಲು “ಮೇಘಧೂತ್” ಆಪ್ ಅನ್ನು ಹಾಗೂ ಗುಡುಗು ಮತ್ತು ಮಿಂಚಿನ ಮುನ್ಸೂಚನೆಯನ್ನು ತಿಳಿದುಕೊಳ್ಳಲು “ದಾಮಿನಿ” ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ರೈತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೮೦೮೮೭೩೪೪೮೫, ೦೮೨೬೩-೨೨೮೧೯೮ ಸಂಪರ್ಕಿಸಬಹುದಾಗಿದೆ.

Yellow alert for the next 3-4 days for the district