ಚಿಕ್ಕಮಗಳೂರು: ಉದ್ಯಾನಗಳನ್ನು ನಮ್ಮಂತಹ ಸೇವಾ ಸಂಸ್ಥೆಗಳು ದತ್ತು ತೆಗೆದುಕೊಂಡು ಅದರ ಸ್ವಚ್ಛತೆ, ರಕ್ಷಣೆ ಮತ್ತು ನಿರ್ವಹಣೆ ವಹಿಸಿಕೊಳ್ಳುವುದರಿಂದ ನಗರವನ್ನು ಹಸುರಿನಿಂದ ಕಂಗೊಳಿಸುವಂತೆ ಮಾಡಬಹುದು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ತಿಳಿಸಿದರು.

ನಗರಸಭೆ, ಸ್ವಚ್ಛತಾ ಟ್ರಸ್ಟ್, ವಿಷನ್ ಚಿಕ್ಕಮಗಳೂರು, ಜಿಲ್ಲಾ ಸೌಟ್ಸ್ ಮತ್ತು ಗೈಡ್ಸ್, ಬ್ರಹ್ಮ ಕುಮಾರಿ, ಮಲೆನಾಡು ಕ್ರಿಶ್ಚಿಯನ್ ಅಸೋಸಿಯೇಷನ್ ಸೇರಿದಂತೆ ಇತರೆ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ  ಸ್ವಚ್ಛತೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಗರದಲ್ಲಿ 140 ಕ್ಕೂ ಹೆಚ್ಚು ಪಾರ್ಕ್‌ಗಳಿವೆ. ಇವು ನಗರದ ಶ್ವಾಸಕೋಶಗಳಿದ್ದಂತೆ ಇವುಗಳು ಯಾವುದೇ ಕಾರಣಕ್ಕೂ ಒತ್ತುವರಿ ಆಗದ ಹಾಗೆ ಕಾಪಾಡಿ ನಿರ್ವಹಣೆ ಮಾಡುವುದು ಚಿಕ್ಕಮಗಳೂರಿನ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದರು.

ಬಯಲುಸೀಮೆಯ ರಸ್ತೆಗಳ ಎರಡು ಬದಿಯಲ್ಲಿ ಮರಗಳು ಸೊಂಪಾಗಿ ಬೆಳೆದಿದ್ದು ನಮ್ಮ ಮಲೆನಾಡಿನಲ್ಲಿ ಹೆಚ್ಚು ಪಾಲು ರಸ್ತೆಗಳಲ್ಲಿ ಮರಗಳಿಲ್ಲದಿರುವುದು ವಿಷಾದಕರ ಪ್ರತಿಯೊಬ್ಬರು ಅವರ ಮನೆಯ ಮುಂದೆ ಒಂದು ಗಿಡನೆಟ್ಟು ಪೋಷಿಸಲು ಮನವಿ ಮಾಡಿದರು.

ನಗರಸಭಾ ಆಯುಕ್ತ ಬಸವರಾಜ್ ಮಾತನಾಡಿ, ನಗರದ ವಾರ್ಡ್‌ಗಳಲ್ಲಿ ನೈರ್ಮಲ್ಯವನ್ನು ಕಾಪಾಡುವ ದೃಷ್ಟಿಯಿಂದ ಆಸಕ್ತರನ್ನು ಕೂಡಿದ ವಾರ್ಡ್ ಸಮಿತಿಗಳನ್ನು ರಚಿಸಿ ಅದರ ಮೂಲಕ ಸ್ವಚ್ಛತೆ ಕಾಪಾಡಲು ಸಾರ್ವಜನಿಕರನ್ನು ಪ್ರೇರೆಪಿಸಿ ಕಾರ್ಯಪ್ರವೃತ್ತರನ್ನಾಗಿಸಬೇಕಾಗಿದೆ ಎಂದು ತಿಳಿಸಿದರು.

ಸ್ಕೌಟ್ ಜಿಲ್ಲಾ ಆಯುಕ್ತ ಎ.ಎನ್.ಮಹೇಶ್, ಪ್ರಕಾಶ್, ರಾಘವೇಂದ್ರ, ಕಿರಣ್, ನವೀನ್ ಮತ್ತು ನಗರದ ವಿವಿಧ ಕಾಲೇಜಿನ ರೋವರ್‍ಸ್ ಮತ್ತು ರೇಂಜರ್‍ಸ್ ಭಾಗಿಯಾಗಿದ್ದರು.