ಚಿಕ್ಕಮಗಳೂರು: ಗಿರಿಶ್ರೇಣಿಯ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಕೊರೋನ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಸಂಘಟನೆಯ ಕಾರ್ಯಕರ್ತರು ಭಾನುವಾರ ಬೆಳಗ್ಗೆ ಕೈಮರ ಚೆಕ್ಪೋಸ್ಟ್ ಬಳಿ ಪ್ರತಿಭಟನೆ ನಡೆಸಿದರು.

ಸಂಘಟನೆಯ ಮುಖಂಡ ರಸೂಲ್ ಖಾನ್ ಅವರನ್ನು ಪೊಲೀಸರು ಈ ಸಂದರ್ಭದಲ್ಲಿ ವಶಕ್ಕೆ ಪಡೆದರು.
ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರು ನಿಯಮಗಳನ್ನು ಪಾಲಿಸುತ್ತಿಲ್ಲ, ಮಾಸ್ಕ್ ಗಳನ್ನು ಧರಿಸದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ, ಈ ಬಗ್ಗೆ ಚೆಕ್ಪೋಸ್ಟ್ ಸಿಬ್ಬಂದಿಗಳು ಹಾಗೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರಿಗೆ ಕೊರೋನಾ ನೆಗೆಟಿವ್ ವರದಿ ಹಾಗೂ ಲಸಿಕೆ ಪಡೆದ ಬಗ್ಗೆ ದಾಖಲೆ ತೋರಿಸುವುದನ್ನು ಕಡ್ಡಾಯಗೊಳಿಸಬೇಕು, ನಿರ್ಬಂಧಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಿಂದಾಗಿ ಚೆಕ್ಪೋಸ್ಟ್ ನಿಂದ ಅಲ್ಲಂ ಪುರದ ವರೆಗೆ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.