ಮಂಗಳೂರು/ಉಳ್ಳಾಲ: ಭಾರತೀಯ ವಾಯುಸೇನೆ ಕಾಬೂಲ್ ನಿಂದ ಏರ್ ಲಿಫ್ಟ್ ಮಾಡಿದವರಲ್ಲಿ ಒಬ್ಬರಾಗಿದ್ದ ಉಳ್ಳಾಲದ ಮೆಲ್ವಿನ್ ಬುಧವಾರ (ಆಗಸ್ಟ್ ೧೮) ಸುರಕ್ಷಿತವಾಗಿ ಮರಳಿದ್ದಾರೆ.

ಮೆಲ್ವಿನ್ ಕಾಬುಲ್ ನಲ್ಲಿ ನ್ಯಾಟೋ ಪಡೆಯ ಮಿಲಿಟರಿ ಬೇಸ್ ಕ್ಯಾಂಪ್ ಆಸ್ಪತ್ರೆಯಲ್ಲಿ ಎಲೆಕ್ಟ್ರಿಕಲ್ ಮೆಂಟೆನೆನ್ಸ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಭಾರತೀಯ ವಾಯುಸೇನೆ C17 ವಿಮಾನವು ಒಟ್ಟು ೧೬೦ ಮಂದಿ ಭಾರತೀಯರನ್ನು ಮಂಗಳವಾರ ಬೆಳಿಗ್ಗೆ ೫ಗಂಟೆಗೆ ಕಾಬೂಲ್ ನಿಂದ ಗುಜರಾತ್ ಜಾಮ ನಗರದ ವಾಯುಸೇನಾ ನೆಲೆಗೆ ಕರೆತಂದಿದೆ.

ಇಲ್ಲಿಂದ ಮೆಲ್ವಿನ್ ಅವರು ದೆಹಲಿ- ಬೆಂಗಳೂರು ಮೂಲಕ ಉಳ್ಳಾಲದ ಸ್ವಗೃಹ ಸೇರಿದ್ದಾರೆ.  ಇವರ ಸೋದರ ಅಫ್ಘಾನಿಸ್ತಾನದಲ್ಲೇ ಇದ್ದು ಭಾರತೀಯ ವಾಯುಸೇನೆಯ ವಿಮಾನಕ್ಕಾಗಿ ಎದುರು ನೋಡುತ್ತಿದ್ದಾರೆ.

ಕಾಬೂಲ್ ಮಿಲಿಟರಿ ಬೇಸ್ ಆಗಸ್ಟ್ ೩೧ರ ವರೆಗೆ ಸುರಕ್ಷಿತವಾಗಿ ಇದ್ದು ವಿದೇಶಿಯರು ತಮ್ಮ ದೇಶೀಯ ವಿಮಾನಗಳ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.  ಸ್ಥಳೀಯ ನಿವಾಸಿಗಳು ತಾಲಿಬಾನ್ ಟಾರ್ಗೆಟ್ ಮಾಡೋ ಮೊದಲೇ ದೇಶ ತೊರೆಯಲು ವಿಮಾನ ನಿಲ್ದಾಣಕ್ಕೆ ಜಮಾಯಿಸಿದ್ದಾರೆ, ಕೆಲವರು ಕ್ಯಾಂಪ್ ನಿಂದ ಹೊರಗೆ ಹೋಗಲು ಯತ್ನಿಸುತ್ತಿದ್ದಾರೆ.

ಎರಡು ದಿವಸದಲ್ಲಿ ಆಹಾರ ಸಮಸ್ಯೆ ಆಗುವ ಸಾಧ್ಯತೆ ಇದೆ ಎಂದ ಅವರು ಹೇಳಿದ್ದಾರೆ.

ಭಾರತೀಯ ರಾಯಬಾರಿ ಕಚೇರಿಯ ಸಿಬ್ಬಂದಿ ಸೇರಿದಂತ ಸೆಕ್ಯುರಿಟಿ ತಂಡವನ್ನು ಕರೆತರಲು ಹೋಗಿದ್ದ ಭಾರತೀಯ ವಾಯುಸೇನಾ ವಿಮಾನ ಮೆಲ್ವಿನ್ ಅವರ ಕಚೇರಿಯ ೭ ಜನ ಸೇರಿದಂತೆ ಒಟ್ಟು ೧೬೦ ಮಂದಿಯನ್ನು ಏರ್ ಲಿಫ್ಟ್ ಮಾಡಿದೆ.