ಚಿಕ್ಕಮಗಳೂರು: ಜಿಲ್ಲೆಯ ಮೂರು ತಾಲ್ಲೂಕುಗಳ ಕೆರೆಗಳನ್ನು ತುಂಬಿಸುವ ೪ ಪ್ರಮುಖ ಯೊಜನೆಗಳಿಗೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದ್ದು, ಸಧ್ಯದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ಅವರು ಶುಕ್ರವಾರ ಕರಗಡ ೨ ನೇ ಹಂತದ ಯೋಜನೆಯ ನೀರೆತ್ತುವ ಯಂತ್ರಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ಬಯಲು ಭಾಗದ ಕೆರೆಗಳಿಗೆ ನೀರು ತುಂಬಿಸುವ ೪ ಯೋಜನೆಗಳು ಈಗಾಗಲೇ ಟೆಂಡರ್ ಹಂತದಲ್ಲಿದ್ದು, ಇವೆಲ್ಲವೂ ಪೂರ್ಣಗೊಂಡಲ್ಲಿ ನೀರಿನ ಸಮಸ್ಯೆಗೆ ಬಹುತೇಕ ಪರಿಹಾರ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.

ಈ ಪೈಕಿ ಭದ್ರಾ ಜಲಾಶಯದಿಂದ ಮೂರೂ ತಾಲ್ಲೂಕುಗಳ ಕೆರೆ ತುಂಬಿಸುವ ೧೨೨೭ ಕೋಟಿ ರೂ.ವೆಚ್ಚದ ಗೋಂದಿ ಯೋಜನೆಗೆ ಮೊದಲ ಹಂತದಲ್ಲಿ ೪೦೦ ಕೋಟಿ ರೂ.ಬಿಡುಗಡೆಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಬ್ಬರನ್ನೂ ಕರೆಸಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಸಂಬಂಧ ಆಗಸ್ಟ್ ೧೬ ರಂದು ಅವರನ್ನು ಭೇಟಿ ಮಾಡಿ ಆಹ್ವಾನಿಸಲಿದ್ದೇವೆ ಎಂದು ತಿಳಿಸಿದರು.

ಉಳಿದಂತೆ ಚಿಕ್ಕಮಗಳೂರು ಭಾಗದ ಕೆರೆಗಳನ್ನು ತುಂಬಿಸುವ ಕರಗಡ ಎರಡನೇ ಹಂತದ ಯೋಜನೆಯಡಿ ಈಗಾಗಲೇ ೪ ಕೋಟಿ ರೂ. ವೆಚ್ಚದಲ್ಲಿ ನೀರೆತ್ತುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ. ಹಳೇಬೀಡಿನ ರಣಘಟ್ಟ ಯೋಜನೆಗೆ ೧೨೪ ಕೋಟಿ ರೂ. ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ. ಲಕ್ಯ ಭಾಗದ ಕೆರೆಗಳನ್ನು ತುಂಬಿಸುವ ಮಾದರಸನ ಕೆರೆ ತುಂಬಿಸುವ ಯೋಜನೆಗೆ ೧೭ ಕೋಟಿ ರೂ. ಹಾಗೂ ಹಿರೇಮಗಳೂರು ಕೆರೆಯಿಂದ ಭೈರಾಪುರ ಕೆರೆ ತುಂಬಿಸುವ ಯೋಜನೆಗೆ ೧೧ ಕೋಟಿ ರೂ. ಮಂಜೂರಾಗಿದೆ. ಈಗಾಗಲೇ ಭೈರಾಪುರ ಯೋಜನೆಯಲ್ಲಿ ೬ ಕಿ.ಮೀ.ಪೈಪ್ ಅಳವಡಿಸುವ ಕಾರ್ಯ ಮುಗಿದಿದೆ ಇನ್ನು ೧೦ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಬಹುತೇಕ ಹಳ್ಳಿಗಳಿಗೆ ಕಾಂಕ್ರಿಟ್ ರಸ್ತೆಗಳನ್ನು ಮಾಡಿಸಿದ್ದೇನೆ. ಆದರೂ ಎಲ್ಲಾ ಕೆರೆಗಳು ತುಂಬಿ ರೈತರ ಮುಖದಲ್ಲಿ ಸಂತೋಷ ಕಂಡಾಗಲೇ ನನಗೆ ಪೂರ್ಣ ಸಮಾಧಾನವಾಗುತ್ತದೆ ಎಂದರು.

ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಿ ಒಂದಷ್ಟು ಉದ್ಯೋಗ ಸೃಷ್ಠಿ ಆಗಬೇಕು ಎಂದು ಹಠ ತೊಟ್ಟಿದ್ದೇವೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮುಂದಿನ ಬಜೆಟ್ ಒಳಗಾಗಿ ಅದಕ್ಕೆ ಮಂಜೂರಾತಿ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಈಗಾಗಲೇ ಮೆಡಿಕಲ್ ಕಾಲೇಜು ಕಾಮಗಾರಿ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗಿವೆ. ಕಡೂರು ಮೂಡಿಗೆರೆ ರಸ್ತೆ ಅಭಿವೃದ್ಧಿ ಆಗುತ್ತಿದೆ. ಚಿಕ್ಕಮಗಳೂರು ಬೇಲೂರು ರಸ್ತೆ ಅಭಿವೃದ್ಧಿ ಯೋಜನೆಗೆ ಮಂಜೂರಾತಿ ಕೊಡಿಸುತ್ತೇವೆ ಎಂದರು.

ನಾನು ಸೋಮಾರಿಯಲ್ಲ ಹಾಗೆಯೇ ಅಧಿಕಾರಕ್ಕೆ ಬೆನ್ನುಬಿದ್ದವನೂ ಅಲ್ಲ. ಪಕ್ಷ ಸಂಘಟನೆಗಾಗಿ ಮಂತ್ರಿ ಸ್ಥಾನವನ್ನೂ ಬಿಟ್ಟುಬಂದಿದ್ದೇನೆ. ಹಾಗೆಂದು ಜನಹಿತ ಹಾಗೂ ಅವರಿಗೆ ಕೊಟ್ಟ ಭರವಸೆಯನ್ನು ಮರೆಯುವ ಮಾತೇ ಇಲ್ಲ ಎಂದರು.

ಪಕ್ಷ ತಾಯಿ ಇದ್ದಂತೆ, ಪಕ್ಷದ ಮೇಲಿನ ಪ್ರೀತಿಯಿಂದ ಕೆಲವೊಮ್ಮೆ ಕಠಿಣವಾಗಿ ಮಾತನಾಡಿದ್ದೇನೆ. ದೇಶ ಮೊದಲು, ನಂತರ ಪಕ್ಷ ಎಂಬುದು ನಮ್ಮ ಸಿದ್ಧಾಂತ. ಒಳ ರಾಜಕೀಯ ಮಾಡಿ ನಮಗೆ ಗೊತ್ತಿಲ್ಲ. ಕಾಲೆಳೆಯುವ ಕೆಲಸವನ್ನೂ ಮಾಡುವುದಿಲ್ಲ. ಯೋಗದಲ್ಲಿ ಇದ್ದದ್ದು ಬಂದೇ ಬರುತ್ತದೆ ಎಂದು ನಂಬಿದವನು ನಾನು. ಅಭಿವೃದ್ಧಿಯ ಹೆಜ್ಜೆಗುರುತನ್ನು ಬಿಟ್ಟುಹೋಗುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಹಿಡಿದ ಕೆಲಸದಿಂದ ಹಿಂದೆ ಸರಿಯುವುದಿಲ್ಲ. ತತ್ವದ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಪುಷ್ಪಗಿರಿ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿ ಆಶೀರ್ವಚನ ನೀಡಿ, ೨೦೨೧ ರ ನಂತರ ಈ ಭಾಗದ ರೈತರ ಕಷ್ಟ ದೂರವಾಗುತ್ತದೆ. ಇದೇ ವೇಳೆ ಈ ಯೋಜನೆಗೆ ಅಳವಡಿಸಿರುವ ಮೋಟಾರ್‌ಗಲ್ಲಲಿ ಮುಂದೆ ಸಮಸ್ಯೆ ಬರಬಹುದು. ವಿದ್ಯುತ್ ಬಿಲ್ ಕಟ್ಟುವುದು ಯಾರು ಎನ್ನುವ ಪ್ರಶ್ನೆ ಬರಬಹುದು ಅದಕ್ಕಾಗಿ ಒಂದಷ್ಟು ಅನುದಾನವನ್ನು ಮೀಸಲಿಡಬೇಕು ಎಂದು ಸಲಹೆ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ರಾಜಕಾರಣಿಗಳಲ್ಲಿ ಚುನಾವಣೆ ಗೆಲುವು, ಅಧಿಕಾರದ ನಿರೀಕ್ಷೆ ಜೊತೆಗೆ ಇಚ್ಛಾಶಕ್ತಿ ಇದ್ದಾಗ ಮಾತ್ರ ಜನಪರವಾಗಿ ಕೆಲಸ ಮಾಡಲು ಸಾಧ್ಯ ಅದಕ್ಕೆ ಶಾಸಕ ಸಿ.ಟಿ.ರವಿ ಅವರು ಉದಾಹರಣೆ ಎಂದರು.

ಬಸವಮಂದಿರದ ಡಾ. ಶ್ರೀ ಮರುಳಸಿದ್ದ ಸ್ವಾಮೀಜಿ, ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ ಹಾಗೂ ಯೋಜನೆ ವ್ಯಾಪ್ತಿಯ ಚುನಾಯಿತ ಪ್ರತಿನಿಧಿಗಳು, ರಾಜಕೀಯ ಮುಖಂಡರು, ರೈತರು ಭಾಗವಹಿಸಿದ್ದರು. ತಾ.ಪಂ.ಮಾಜಿ ಅಧ್ಯಕ್ಷ ಈಶ್ವರಳ್ಳಿ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಜಿ.ಪಂ. ಸದಸ್ಯೆ ಬೆಳವಾಡಿ ರವೀಂದ್ರ ಸ್ವಾಗತಿಸಿದರು.