ಚಿಕ್ಕಮಗಳೂರು:  ಭಾರತ ದೇಶವು ಒಂದು ವಿಶೇಷವಾದ ಸಬ್ಯ ಸಂಸ್ಕೃತಿಯನ್ನು ಹೊಂದಿದ್ದು, ಪ್ರಕೃತಿಯನ್ನು ತಾಯಿಯೆಂದು ಪೂಜಿಸುವ ಮೂಲಕ ಎಲ್ಲದರಲ್ಲೂ ಭಗವಂತನನ್ನು ಕಾಣುವಂತಹ ಒಂದು ಸನಾತನ ಸಂಸ್ಕೃತಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಗಂಗಾ ಮಾತೆಗೆ ಭಾಗಿನ ಅರ್ಪಿಸಿದ್ದೇವೆ ಎಂದು  ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಟಿ. ರವಿ ಅವರು ಹೇಳಿದರು.

ಅವರು ಇಂದು ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಅಯ್ಯನ ಕೆರೆ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ  ಮಾತನಾಡಿ ಕೆರೆ ಕೋಡಿ ಬಿದ್ದಾಗ, ಅಣೆಕಟ್ಟುಗಳು ತುಂಬಿ ಹರಿದಾಗ ಕೃತಜ್ಞತಾ ಪೂರಕವಾಗಿ ಸ್ಮರಿಸುವುದು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದ್ದು, ಎಂದ ಅವರು ನೀರು ಅತ್ಯವಶ್ಯಕ ಅಂಶವಾಗಿದ್ದು ನೀರು ಇಲ್ಲದೆ ಯಾರೊಬ್ಬರು ಸಹ ಬದುಕಲು ಸಾಧ್ಯವಿಲ್ಲಾ, ನೀರನ್ನು ಹಲವಾರು ಭಾಷೆಗಳಲ್ಲಿ ಹಲವಾರು ಹೆಸರುಗಳಿಂದ ಕರೆಯುತ್ತಾರೆ ಆದರೆ ನೀರು ಎಲ್ಲರಿಗೂ ಒಂದೇ ಎಂದು ತಿಳಿಸಿದರು.

ಪ್ರಕೃತಿಯೊಂದಿಗೆ ಮನುಷ್ಯರು ತಾಯಿ-ಮಕ್ಕಳ ಸಂಬಂಧವನ್ನು ಬೆಳೆಸಿಕೊಳ್ಳಬೇಕು, ಅಗತ್ಯವಿರುವಷ್ಟು ನೀರನ್ನು ಉಪಯೋಗಿಸಿಕೊಳ್ಳಬೇಕು ಹಾಗೂ ಆಸೆಯನ್ನು ಈಡೇರಿಸುವಂತಹ ಶಕ್ತಿಯನ್ನು ಭಗವಂತ ಪ್ರಕೃತಿಯ ಮೂಲಕ ನಮಗೆ ನೀಡಿದ್ದಾನೆ. ಎಂದ ಅವರು ಮಹಾತ್ಮಾ ಗಾಂಧೀಜಿಯವರು ಹೇಳಿದಂತೆ ಪ್ರಕೃತಿಗೆ ಮನುಷ್ಯನ ಆಸೆಗಳನ್ನು ಈಡೇರಿಸುವ ಶಕ್ತಿಯಿದೆ ವರತು ದುರಾಸೆಯನ್ನಲ್ಲ ಆದರಿಂದ ಇತಿಮಿತಿಯಲ್ಲಿ ಪ್ರಕೃತಿಯನ್ನು ಬಳಸಿಕೊಳ್ಳಬೇಕು ಎಂದರು.

ಅಯ್ಯನ ಕೆರೆ ಭಾಗದ ಅಭಿವೃದ್ಧಿಗೆ ೪ ಕೋಟಿ ೮೫ ಲಕ್ಷ ರೂ ಸೇರಿದಂತೆ ಸಖರಾಯಪಟ್ಟಣ ವ್ಯಾಪ್ತಿಗೆ ೨ ವರ್ಷದ ಅವಧಿಯಲ್ಲಿ ೨೬ ಕೋಟಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ಮಾತನಾಡಿ, ತಾಯಿ ಗಂಗಾ ಮಾತೆಯನ್ನು ಪೂಜಿಸುವುದು ಹಿಂದೂ ಧರ್ಮದ ಸಂಸ್ಕ್ರತಿಯಾಗಿದ್ದು, ಆ ನಿಟ್ಟಿನಲ್ಲಿ ಇಂದು ಅಯ್ಯನ ಕೆರೆ ತುಂಬಿ ಕೋಡಿ ಬಿದ್ದಿರುವ ಕಾರಣ ಕೃತಜ್ಞತಾ ಪೂರಕವಾಗಿ ಬಾಗಿನ ಅರ್ಪಿಸಿದ್ದೆವೆ ಎಂದ ಅವರು ಪರಿಸರದೊಂದಿಗೆ ಉತ್ತಮ ಸ್ನೇಹವನ್ನು ಬೆಳೆಸಿಕೊಳ್ಳಬೇಕು, ಪ್ರಕೃತಿಯ ವಿರುದ್ಧವಾಗಿ ನಡೆಯಬಾರದು ಹಾಗೂ ಪರಿಸರವನ್ನು ಸ್ವಚ್ಚತೆಯಿಂದ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ವಿಧಾನ ಪರಿಷತ್ ಶಾಸಕ ಎಸ್.ಎಲ್ ಭೋಜೆಗೌಡ ಮಾತನಾಡಿ, ಕಡೂರು ಭಾಗದ ರೈತರಿಗೆ ಅಯ್ಯನ ಕೆರೆಯು ಜೀವಾಳ ಆಗಿದ್ದು, ಅಂತರ್ಜಲ ಮಟ್ಟವನ್ನು ವೃದ್ಧಿಸುವಲ್ಲಿ ಅತಿ ಮುಖ್ಯ ಪಾತ್ರವಹಿಸಿದೆ ಎಂದ ಅವರು ನೀರು ಎಲ್ಲಾರಿಗೂ ಅವಶ್ಯಕವಾಗಿ ಬೇಕಾಗಿರುವುದರಿಂದ ನೀರನ್ನು ಮೀತವಾಗಿ ಬಳಕೆಗೆ ಅಗತ್ಯವಿರುವಷ್ಟು ಬಳಸುವ ಮೂಲಕ ಮುಂಬರುವ ಸಂಕಷ್ಟದ ಪರಿಸ್ಥಿತಿಗಳು ಹಾಗೂ ಮುಂದಿನ ಪೀಳಿಗೆಗೆ  ಸಂಗ್ರಹಿಸಿಡಬೇಕು ಎಂದು ತಿಳಿಸಿದರು.

ಕೆರೆಯು ತುಂಬಿ ಕೋಡಿ ಬಿದ್ದಿರುವುದರಿಂದ ಸುತ್ತ-ಮುತ್ತಲಿನ ರೈತರು ಮುಖದಲ್ಲಿ ಮಂದಹಾಸ ಮೂಡಿದ್ದು ಪ್ರತಿ ವರ್ಷವು ಸಹ ಈ ವರ್ಷದಂತೆಯೇ ತುಂಬಿ ಹರಿದು ಈ ಭಾಗದ ರೈತರ ಬದುಕು ಸಮೃದ್ಧಿಯಾಗಲಿ ಎಂದ ಅವರು ರೈತರು ನೀರಿನ ವಿಚಾರದಲ್ಲಿ ರಾಜಕೀಯ ಮಾಡದಂತೆ ಆಗತ್ಯಕ್ಕೆ ಅನುಗುಣವಾಗಿ ಬಳಸುವ ಮೂಲಕ ನೀರಿನ ಅನುಕೂಲವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಬಸವ ಮಂದಿರ ಪೀಠದ ಪೀಠಾಧ್ಯಕ್ಷ ಡಾ. ಶ್ರೀ ಮರುಳಸಿದ್ದ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಖರಾಯ ಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲ, ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ  ಮಹಾಸ್ವಾಮೀಜಿ,  ಅಯ್ಯನಕೆರೆ ಅಚ್ಚುಕಟ್ಟು ಸಮಿತಿಯ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.