ನವದೆಹಲಿ: 1971ರಲ್ಲಿ ಪಾಕಿಸ್ತಾನದ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿ ರೂಪುಗೊಂಡ ಬಾಂಗ್ಲಾದೇಶದಲ್ಲಿ ವಿಮೋಚನೆಯ 50ನೇ ವರ್ಷದ ಮಹೋತ್ಸವ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಡಿ. 16ರಂದು ನಡೆಯುವ ವಿಜಯೋತ್ಸವದ (ಪಾಕ್ ಸೇನೆ ಸಂಪೂರ್ಣವಾಗಿ ವಾಪಸಾದ ದಿನ) ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗಿಯಾಗಲಿದ್ದಾರೆ. ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್‌ ಹಮೀದ್‌ ಅವರ ಆಹ್ವಾನ ಮನ್ನಿಸಿ ಕೋವಿಂದ್ ಅವರು ಎರಡು ದಿನ ಬಾಂಗ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

ಕೋವಿಂದ್ ಅವರು ಇದೇ ಮೊದಲ ಬಾರಿಗೆ ಬಾಂಗ್ಲಾದೇಶಕ್ಕೆ ಭೇಟಿ ನೀಡುತ್ತಿದ್ದು, ಅವರ ಆತಿಥ್ಯಕ್ಕೆ ಇಡೀ ದೇಶ ಸಜ್ಜಾಗಿದೆ ಎಂದು ಬಾಂಗ್ಲಾ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್‌ ಮೊಮೆನ್ ಹೇಳಿದ್ದಾರೆ.

ಬಾಂಗ್ಲಾದೇಶದ ಸಂಸ್ಥಾಪಕ ಶೇಕ್‌ ಮುಜಿಬುರ್‌ ರೆಹಮಾನ್‌ ಅವರ ಜನ್ಮ ಶತಮಾನೋತ್ಸವ ವರ್ಷದ ಸಮಾರೋಪ ಹಾಗೂ ಭಾರತ ಮತ್ತು ಬಾಂಗ್ಲಾದ ಮೈತ್ರಿಗೆ 50 ವರ್ಷ ತುಂಬಿದ ಸಲುವಾಗಿ ಮೈತ್ರಿ ದಿವಸ್‌ ಆಚರಣೆಯಲ್ಲೂ ಕೋವಿಂದ್ ಭಾಗಿಯಾಗಲಿದ್ದಾರೆ. ಮೈತ್ರಿ ದಿವಸದ ಲೋಗೋ ಮತ್ತು ಬ್ಯಾಕ್‌ಡ್ರ್ಯಾಪ್‌ ತಯಾರಿಕೆಗೆ ಬಾಂಗ್ಲಾ-ಭಾರತ ಜಂಟಿಯಾಗಿ ಡಿ. 6ರಂದು ಸ್ಪರ್ಧೆಯನ್ನು ಏರ್ಪಡಿಸಿದೆ.

1971ರ ಮಾರ್ಚ್‌ 25ರಂದು ಪೂರ್ವ ಪಾಕಿಸ್ತಾನದ ಸೇನೆಯನ್ನು ಮಣಿಸಿದ ಭಾರತದ ಸೇನೆ 90 ಸಾವಿರ ಸೈನಿಕರನ್ನು ಶರಣಾಗುವಂತೆ ಮಾಡಿತು. ಈ ಮೂಲಕ ಪಶ್ಚಿಮ ಪಾಕಿಸ್ತಾನದ (ಬಾಂಗ್ಲಾದೇಶ) ವಿಮೋಚನಾ ಹೋರಾಟಕ್ಕೆ ಜಯ ದೊರೆಯುವಂತೆ ಮಾಡಿತು. ಡಿಸೆಂಬರ್‌ 16ರಂದು ಪೂರ್ವ ಪಾಕಿಸ್ತಾನದ ಸೇನೆ ಬಾಂಗ್ಲಾದೇಶದಿಂದ ಸಂಪೂರ್ಣವಾಗಿ ಕಾಲ್ತೆಗೆಯಿತು.

ಇದನ್ನೂ ಓದಿ:  ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆಯಲು ಕಾರಣರಾದ ಪಾಕಿಸ್ತಾನ ಮಾಜಿ ಯೋಧಗೆ ಭಾರತದ ಪದ್ಮಶ್ರೀ ಗೌರವ