ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಗಳು ತಮ್ಮದೇ ಆದ ವಿಶೇಷ ಮಹತ್ವ ಹೊಂದಿದೆ. ಯುಗಾದಿ, ಗೌರಿ ಗಣೇಶ ಚತುರ್ಥಿ, ಸಂಕ್ರಾಂತಿ ಹೀಗೆ ವರ್ಷ ಪೂರ್ತಿ ಹಬ್ಬಗಳ ಸರಮಾಲೆಯೇ ಇದ್ದು ಪ್ರತಿ ಹಬ್ಬವೂ ಒಂದೊಂದು ವಿಶೇಷತೆ ಒಳಗೊಂಡಿವೆ. ಅದರಲ್ಲೂ ನವೆಂಬರ್ ಕಾರ್ತಿಕ ಮಾಸದ ಕೃಷ್ಣ ಪಕ್ಷದ ದಿನದ ದೀಪಾವಳಿ ಸಂಭ್ರಮದೊಂದಿಗೆ ಅತ್ಯಂತ ವಿಶೇಷವೂ ಹೌದು.

ಸಾಮಾನ್ಯವಾಗಿ ‘ದೀಪಾವಳಿ’ಎಂದಾಕ್ಷಣ ನಮ್ಮ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು. ಪ್ರತಿನಿತ್ಯ ನಾವೆಲ್ಲರೂ ಮನೆ ಮನೆಗಳಲ್ಲಿ ದೀಪವನ್ನು ಬೆಳಗುತ್ತೇವೆ, ದೀಪಾವಳಿ ಹಬ್ಬದಲ್ಲೇ ಹಣತೆ, ಬೆಳಕಿಗೆ ಏಕೀಷ್ಟು ಪ್ರಾಮುಖ್ಯತೆ ಎಂದು ನೀವೆಲ್ಲಾ ಆಲೋಚಿಸಿರಬಹುದು ಹೌದು, ಭಾರತೀಯ ಸಂಸ್ಕೃತಿಯಲ್ಲಿ ದೀಪ, ಬೆಳಕಿಗೆ ವಿಶೇಷ ಪ್ರಾಧಾನ್ಯತೆ ಇದೆ. ನಮ್ಮೊಳಗಿನ ಅಂಧಕಾರವನ್ನು ತೊರೆದು ಅಂತ ರಂಗವನ್ನು ಬೆಳಗಿಸುವ ಸಂದೇಶವನ್ನು ಈ ದೀಪ ಸಾರುತ್ತವೆ. ಅದಕ್ಕಾಗಿ ಯಾವುದೇ ಕೆಲಸವನ್ನು ದೀಪ ಬೆಳಗುವ ಮೂಲಕವೇ ಆರಂಭಿಸುತ್ತೇವೆ. ವಿಘ್ನಗಳು ಜರುಗದಂತೆ ದೇವರನ್ನು ಸ್ತುತಿಸುತ್ತೇವೆ.

ನಾವು ಆಚರಿಸುವ ಪ್ರತಿಯೊಂದು ಹಬ್ಬವೂ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಪ್ರಕೃತಿಯಲ್ಲಿ ನಾವು ಹಲವು ದೈವಿ  ಸ್ವರೂಪವನ್ನು ಕಾಣುತ್ತೇವೆ. ಯಾವುದೇ ಪ್ರದೇಶದಲ್ಲಿ ಜೀವಿಸುತ್ತಿರಲಿ, ಆಯಾ ಪರಿಸರದಲ್ಲಿ ಪ್ರಕೃತಿಯಲ್ಲಿ ಆಗುವ ಬದಲಾವಣೆಯನ್ನು ಭಗವಂತನ ಕೃಪೆ, ಲಕ್ಷ್ಮಿಯ ಲೀಲಾವಿಲಾಸ ಎಂದು ಭಾವಿಸಿ ನಾವು ಋತುಗಳ ಹಬ್ಬವನ್ನು ಆಚರಿಸುತ್ತೇವೆ. ಅದರಂತೆ ದೀಪಾವಳಿ ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಹಬ್ಬಗಳಲ್ಲಿ ಒಂದು.

ದೀಪಾವಳಿಯ ಮೂಲ ಹುಡುಕುತ್ತಾ ಹೋದಂತೆ ನಮಗೆ ತಿಳಿಯುವುದು ಪ್ರಾಚೀನ ಭಾರತದಲ್ಲಿ ಅದೊಂದು ಸುಗ್ಗಿಯ ಹಬ್ಬವಾಗಿ ಪ್ರಾರಂಭವಾಯಿತು ಎಂದು. ಆದಾಗ್ಯೂ ಇತಿಹಾಸದ ದಂತಕಥೆಗಳ ಅನುಗುಣವಾಗಿ ಕೆಲವರು ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವಿನ ಮದುವೆಯ ಆಚರಣೆಯ ನಂಬಿಕೆಯಿಂದ ಎಲ್ಲೆಲ್ಲೂ ದೀಪ ಬೆಳಗುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಮತ್ತು ಕೆಲವರು ಕಾರ್ತಿಕ ಅಮವಾಸ್ಯೆಯ ದಿನದಂದು ಲಕ್ಷ್ಮಿ ದೇವಿಯ ಜನ್ಮ ದಿನದ ಆಚರಣೆ ಎಂದು ಸಹ ನಂಬಿದ್ದಾರೆ.

ಇನ್ನೂ ಬಂಗಾಳದಲ್ಲಿ, ದೀಪಾವಳಿಯು ಶಕ್ತಿಶಾಲಿ ದೇವತೆಯಾದ ಕಾಳಿ ದೇವಿಯ ಆರಾಧನೆಯ ದಿನವಾಗಿದೆ. ಕೆಲವರ ಮನೆಗಳಲ್ಲಿ ಮಂಗಳಕರ ಗಣೇಶನ ಪೂಜೆಯನ್ನು ಸಹ ಕೈಗೊಳ್ಳುತ್ತಾರೆ. ಈ ರೀತಿಯಲ್ಲಿ ವಿವಿದೆಡೆ ದೀಪಾವಳಿಯನ್ನು ಅತ್ಯಂತ ಶ್ರದ್ದಾ ಭಕ್ತಿಯಿಂದ ಸಾಂಪ್ರಾದಾಯಿಕವಾಗಿ ಆಚರಿಸುತ್ತಾರೆ. ವಿಶೇಷವಾಗಿ ಹಿಂದೂಗಳಿಗೆ ದೀಪಾವಳಿ ಶ್ರೀರಾಮನು ೧೪ ವರ್ಷದ ವನವಾಸದ ಬಳಿಕ ಅಯೋಧ್ಯೆಗೆ ಹಿಂತಿರುಗಿನ ದಿನ. ಎಂಬ ನಂಬಿಕೆಯೊಂದಿಗೆ ದೀಪ ಬೆಳಗುವ ಮೂಲಕ ರಾಮನನ್ನು ಸ್ವಾಗತಿಸಿದ ದಿನ ಎಂದು ಪುರಾಣಗಳು ತಿಳಿಸುತ್ತವೆ.

‘ಅಸತೋಮಾ ಸದ್ಗಮಯಾ, ತಮಸೋ ಮಾ ಜ್ಯೋತಿರ್ಗಮಯ’ ಎಂಬಂತೆ ದೀಪಾವಳಿ ಎಂಬುದು ಮನೆ-ಮನಗಳಲ್ಲಿ ಬೆಳಕನ್ನು ಚೆಲ್ಲುತ್ತಾ ಕತ್ತಲೆಯನ್ನು ಹೊಡೆದೋಡಿಸುವ ದಿನವಿದು, ಅಂದರೆ ಜೀವನದಲ್ಲಿನ ನೋವು, ದುಃಖ ಎಲ್ಲವನ್ನೂ ಮರೆತು ಸಂತೋಷದ ಬದುಕು ಮತ್ತು ಬೆಳಕು ಕಳೆಗಟ್ಟಲಿ ಎಂಬ ಆಶಯದೊಂದಿಗೆ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತೇವೆ. ಜೀವನದಲ್ಲಿ ಎಲ್ಲಾ ಕೆಟ್ಟ ಸಂದರ್ಭಗಳು ಇಲ್ಲೇ ಕೊನೆಗೊಂಡು ಖುಷಿಯ ದಿನಗಳಷ್ಟೇ ಇನ್ನು ಮುಂದೆ ನಮ್ಮದಾಗಲಿ ಎಂದು ಭಕ್ತಿಯಿಂದ ದೇವರ ಮೊರೆ ಹೋಗುವ ದಿನವಿದು.

ಬೆಳಕಿನೆಡೆಗೆ ಬದುಕು ಎಂಬ ಸಾರವನ್ನು ಸಾರುತ್ತಾ ಹೊಸ ಆರಂಭವನ್ನು ಕಂಡುಕೊಳ್ಳುವ ದಿನವಿದು. ಕುಟುಂಬಸ್ಥರು, ಸ್ನೇಹಿತರು, ಮನೆಯವರು ಎಲ್ಲರೂ ಖುಷಿಯಿಂದ ಸೇರಿ ಹೊಸ ಉಡುಗೆ-ತೊಡುಗೆಗಳನ್ನು ತೊಟ್ಟು, ಸಿಹಿ ತಿಂಡಿಗಳನ್ನು ಮಾಡುವ ಮೂಲಕ ವರಲಕ್ಷ್ಮಿಯನ್ನು ಪೂಜಿಸಿ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮೊಳಗಿನ ಅಂಧಕಾರವನ್ನು ತೊರೆದು ಅಂತ ರಂಗವನ್ನು ಬೆಳಗಿಸುವ ಸಂದೇಶವನ್ನು ಸಾರುವ ದೀಪಾವಳಿ ಹಬ್ಬ ನಮಗೆಲ್ಲರಿಗೂ ವಿಶೇಷವೇ ಸರಿ.

ಜೀವನದ, ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ. ದೀಪಗಳ ತುದಿ ಸರ್ವತೋಮುಖವಾಗಿದೆ, ದೀಪ ಹಚ್ಚಿದರೆ ಸುತ್ತಲೂ ಬೆಳಗುತ್ತದೆ. ಆದರೆ ದೀಪದ ಗಮನ ಊರ್ದ್ವಮುಖವಾಗಿರುತ್ತದೆ. ಅಂದರೆ ದೀಪ ಬೆಳಗುವ ಮನುಷ್ಯನ ಮನಸ್ಸು ಕೂಡ ಸದಾ ಊರ್ದ್ವಗಾಮಿಯಾಗಿರಬೇಕು, ಮನುಷ್ಯ ಸದಾ ಇತಿಮಿತಿಗಳನ್ನು ಮೀರಿ ದೀಪದಂತೆ ಮೇಲಕ್ಕೆ ಬೆಳಗುತ್ತಾ ಹೋಗಬೇಕು. ದೀಪ ಹೇಗೆ ತನ್ನನ್ನು ತಾನು ಉರಿದುಕೊಂಡು ಸುತ್ತಲಿಗೆ ಬೆಳಕು ಕೊಡುತ್ತದೋ ಮನುಷ್ಯ ಕೂಡ ತಾನು ತ್ಯಾಗ ಮಾಡಿ ಸುತ್ತಲಿನವರ ಬಾಳಿಗೆ ಬೆಳಕಾಗಬೇಕು ಎಂಬ ಸಂಕೇತ ಕೂಡ ಇಲ್ಲಿ ಅಡಗಿದೆ.

ದೀಪಾವಳಿ ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಹಬ್ಬ. ಇಲ್ಲಿ ಲಕ್ಷ್ಮಿ ದೇವಿಯನ್ನು ನಮ್ಮ ಜೀವನ ವೃದ್ಧಿಯ, ಬೆಳಕಿನ ಸಂಕೇತವಾಗಿ ಕಾಣುತ್ತೇವೆ. ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿ ಕೊಂಡಿರುವಂತಹ  ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥ ಕೂಡ ಇದೆ. ಒಟ್ಟಾರೆಯಾಗಿ ಕೊರೋನಾ ಸಾಂಕ್ರಾಮಿಕ ರೋಗದಿಂದ ತತ್ತರಿಸಿರುವ ದೇಶದ ಜನತೆಗೆ ದೀಪಾವಳಿ ಸುಖ ಶಾಂತಿ, ಸಮೃದ್ಧ ಆರೋಗ್ಯ ನೀಡಿ ಮನೆಮನೆಗಳ್ಳಿ ಹೊಸ ಬೆಳಕು ಮೂಡುವಂತೆ ಆಗಲಿ.