ಕಠ್ಮಂಡು: ರಸ್ತೆಯಲ್ಲಿ ವಾಹನ ಕಾರು, ಬಸ್, ಟ್ರಕ್‌ಗಳು ಕೆಟ್ಟು ನಿಂತರೆ ಅದನ್ನು ತಳ್ಳಿ ಪಕ್ಕಕ್ಕೆ ನಿಲ್ಲಿಸುವುದು ಸರ್ವೆ ಸಾಮಾನ್ಯ ಘಟನೆ. ಆದರೆ ವಿಮಾನವೊಂದನ್ನು ದಬ್ಬಿರುವ ಘಟನೆ ನೇಪಾಳದ  ಕೋಟ್ಲಿಯ ಬಜುರಾ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ತಾರಾ ಏರ್‌ಲೈನ್ಸ್‌ನ ಸಣ್ಣ ಗಾತ್ರದ ವಿಮಾನ ರನ್‌ವೇನಲ್ಲಿದ್ದಾಗ ಅದರ ಟೈರ್‌ ಸ್ಫೋಟಗೊಂಡು ಚಲಿಸಲು ಆಗದೆ ನಿಂತಿತು. ಇದೇ ಸಮಯದಲ್ಲಿ ಮತ್ತೊಂದು ವಿಮಾನ ರನ್‌ ವೇನಲ್ಲಿ ಇಳಿಯಲು ಅನುಮತಿ ಕೋರಿ ವಿಮಾನ ನಿಲ್ದಾಣದ ಸುತ್ತು ಹಾಕುತ್ತಿತ್ತು. ಕೆಟ್ಟು ನಿಂತ ವಿಮಾನವನ್ನು ಎಳೆಯಲು ಅಗತ್ಯ ಸೌಕರ್ಯಗಳು ಇರಲಿಲ್ಲ. ಜತೆಗೆ ಟ್ಯಾಕ್ಸಿ ವೇ (ವಿಮಾನಗಳನ್ನು ನಿಲ್ಲಿಸುವ ಸ್ಥಳ)ನಲ್ಲಿ ಜಾಗ ಕೂಡ ಇರಲಿಲ್ಲ. ಹೀಗಾಗಿ ಪ್ರಯಾಣಿಕರು, ವಿಮಾನ ನಿಲ್ದಾಣದ  ಭದ್ರತಾ ಸಿಬ್ಬಂದಿ ತಾರಾ ಏರ್‌ಲೈನ್ಸ್ನ ವಿಮಾನವನ್ನು ರನ್‌ ವೇಯಿಂದ ಬದಿಗೆ ಸರಿಸಲು ಸ್ವಲ್ಪ ದೂರ ಅದನ್ನು ದಬ್ಬಿಕೊಂಡು ಬಂದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, “ಓನ್ಲಿ ಇನ್‌ ನೇಪಾಳ್‌’ ಎಂಬ ಅಡಿ ಬರಹದಲ್ಲಿ ಟ್ವೀಟ್‌ ಆಗಿದೆ. ಸಾವಿರಾರು ಮಂದಿ ರಿಟ್ವೀಟ್‌ ಮಾಡಿದ್ದಾರೆ.

ತಾರಾ ಏರ್‌ 9ಎನ್-ಎವಿಇ ವಿಮಾನವು ಬಜುರಾ ವಿಮಾನ ನಿಲ್ದಾಣದಲ್ಲಿ ಇಳಿದು ರನ್‌ ವೇನಲ್ಲಿ ಚಲಿಸುತ್ತಿದ್ದಾಗ ಟೈರ್‌ ಸ್ಫೋಟಗೊಂಡು ನಿಂತಿಕೊಂಡಿತು. ಯಾವುದೇ ಅಪಾಯ ಆಗಲಿಲ್ಲ. ಆದರೆ,  ತಾರಾ ಏರ್‌ ವಿಮಾನದ ಹಿಂದೆಯೇ ಆಗಮಿಸಿದ ಇನ್ನೊಂದು ವಿಮಾನ ಇಳಿಯುವುದಕ್ಕೆ ಅನುಮತಿಗಾಗಿ ಕಾಯುತ್ತಿತ್ತು. ರನ್‌ ವೇನಲ್ಲಿ ನಿಂತುಕೊಂಡಿದ್ದ ವಿಮಾನವನ್ನು ಎಳೆದು ಪಕ್ಕಕ್ಕೆ ನಿಲ್ಲಿಸಲು ಈ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸೌಕರ್ಯ ಇರಲಿಲ್ಲ. ಜತೆಗೆ ಟ್ಯಾಕ್ಸಿ ವೇನಲ್ಲೂ  ಜಾಗ ಇರಲಿಲ್ಲ.  ಹೀಗಾಗಿ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ಈ ವಿಮಾನವನ್ನು ರನ್‌ ವೇಯಿಂದ ಬದಿಗೆ ಸರಿಸಲು ದಬ್ಬಿದರು ಎಂದು ಯೇತಿ ಏರ್‌ಲೈನ್ಸ್‌ (ತಾರಾ ಏರ್‌ಲೈನ್ಸ್‌ ಮಾತೃ ಸಂಸ್ಥೆ) ವಕ್ತಾರ ಸುರೇಂದ್ರ ಬರ್ತೌಲಾ ಹೇಳಿದ್ದಾರೆ.

ದೆಹಲಿಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ವಿಮಾನವೊಂದು ಪ್ರಯಾಣಿಕರ ಮೇಲ್ಸೇತುವೆಯಲ್ಲಿ ಸಿಲುಕಿಕೊಂಡು ಸುದ್ದಿಯಾಗಿತ್ತು.

Passengers Filmed Pushing Airplane Off Runway

ಇದನ್ನು ಓದಿ: ನೇಪಾಳದಲ್ಲಿ ತೀವ್ರ ಹಿಮಕುಸಿತದ ಭಯಾನಕ ದೃಶ್ಯ ವೈರಲ್

ಇದನ್ನೂ ಓದಿ: ವಿಮಾನದಲ್ಲಿ ಚಿಕಿತ್ಸೆ ನೀಡಿದ ಸ್ವತಃ ವೈದ್ಯರಾದ ಕೇಂದ್ರ ಸಚಿವ