ನವದೆಹಲಿ: ಕೋವಿಡ್‌-19 ಸೋಂಕಿನ ಕಾರಣ ಸುಮಾರು ಒಂದೂವರೆ ವರ್ಷದಿಂದ ನೆಲಕಚ್ಚಿದ್ದ ಪ್ರವಾಸೋದ್ಯಮ ನಾಲ್ಕೈದು ತಿಂಗಳಿಂದ ಗರಿಗೆದರಿತ್ತು. ಆದರೆ, ದಕ್ಷಿಣ ಆಫ್ರಿಕಾದಲ್ಲಿ ತಿಂಗಳ ಹಿಂದೆ ಓಮಿಕ್ರಾನ್‌ ಹೊಸ ಪ್ರಭೇದ ಕಾಣಿಸಿಕೊಂಡ ನಂತರ ವಿದೇಶ ಮತ್ತು ದೇಶದೊಳಗಿನ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.  ಶೇಕಡಾ 20ರಷ್ಟು ಬುಕಿಂಗ್‌ ರದ್ದುಗೊಂಡಿದೆ.

ಕರ್ನಾಟಕದಲ್ಲಿ ಓಮಿಕ್ರಾನ್‌ ಸೋಂಕು ದೃಢ ಪಡುತ್ತಿದ್ದಂತೆಯೇ ಜನರು ಆತಂಕಗೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ಶೇ. 20ರಷ್ಟು ಬುಕಿಂಗ್‌ಗಳು ರದ್ದುಗೊಂಡಿದೆ ಎಂದು ಚೆನ್ನೈನ ಮಧುರಾ ಟ್ರಾವಲ್‌ ಸರ್ವೀಸ್‌ನ ಶ್ರೀಹರನ್‌ ಬಾಲನ್‌ ಹೇಳಿದ್ದಾರೆ.

ವಿದೇಶಿ ಪ್ರವಾಸದ ಪೈಕಿ ದುಬೈ, ಯುರೋಪ್‌ ದೇಶಗಳ ಪ್ರವಾಸವನ್ನು ಜನರು ಕೈಬಿಟ್ಟಿದ್ದಾರೆ. ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಅನೇಕರು ಪ್ರವಾಸ ಕೈಗೊಂಡಿದ್ದರು. ಈಗ ಯುರೋಪ್‌ನ ಅನೇಕ ದೇಶದಲ್ಲಿ ಓಮಿಕ್ರಾನ್‌ ಪಸರಿಸಿರುವ ಕಾರಣ ಮತ್ತು ವಿದೇಶಿ ಪ್ರಯಾಣಿಕರಿಗೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಪ್ರವಾಸವನ್ನು ರದ್ದು ಮಾಡಿದ್ದಾರೆ ಎಂದು ಬಾಲನ್‌ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಹೊಸದಾಗಿ ಸಂಚಾರ ನಿರ್ಬಂಧ ವಿಧಿಸಿರುವ ಕಾರಣ ಈ ರಾಜ್ಯದ ಪ್ರವಾಸಿ, ಧಾರ್ಮಿಕ ತಾಣಗಳಿಗೆ ಹೋಗುವವರ ಸಂಖ್ಯೆ ಗಣನೀಯವಾಗಿ ಇಳಿಕೆ ಆಗಿದೆ.

2019ರಲ್ಲಿ ಚಳಿಗಾಲದ ಸಮಯದಲ್ಲಿ  ಭಾರತದ ಮೂರು ಅಂತರ್‌ರಾಷ್ಟ್ರೀಯ ಏರ್‌ಪೋರ್ಟ್‌ಗಳಿಂದ ಐದು ಲಕ್ಷ ಜನರು ಪ್ರಯಾಣ ಮಾಡಿದ್ದರು. 2020ರಲ್ಲಿ ಪ್ರವಾಸಿಗರ ಸಂಖ್ಯೆ ಶೂನ್ಯವಾಗಿತ್ತು. ಕಳೆದ ವರ್ಷ ನಷ್ಟವಾಗಿದ್ದರೂ ಈ ವರ್ಷ ಬಿಜಿನೆಸ್‌ ಕೈಹಿಡಿಯುತ್ತದೆ ಎಂದು ಪ್ರವಾಸೋದ್ಯಮ ಕ್ಷೇತ್ರ ದೊಡ್ಡ ನಿರೀಕ್ಷೆಯಲ್ಲಿ ಇತ್ತು. ಆದರೆ ಓಮಿಕ್ರಾನ್‌ ಈ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ.

Omicron Hits Tourism Sector With 20% Cancellations

ಇದನ್ನು ಓದಿ: ಓಮಿಕ್ರಾನ್‌ ಸೋಂಕು ಹೆಚ್ಚಳದ ನಡುವೆಯೂ ಭುವನ ಸುಂದರಿ ಸ್ಪರ್ಧೆಗೆ ಇಸ್ರೇಲ್‌ ಆತಿಥ್ಯ

ಇದನ್ನೂ ಓದಿ:  ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್‌ ದ್ವಿಗುಣ; ಈ ದೇಶಗಳಲ್ಲಿ ಹೊಸ ಪ್ರಭೇದದ ಸೋಂಕು