ಗಯಾ: ಬಿಹಾರದ ಗಯಾ ಜಿಲ್ಲೆಯಲ್ಲಿ ಭಾನುವಾರ ‘ಕಾಂಗರೂ ಕೋರ್ಟ್’ (ಕಾನೂನು ಮಾನ್ಯ ಮಾಡದ, ಏಕಪಕ್ಷೀಯವಾಗಿ ನಡೆಯು ನ್ಯಾಯಪಂಚಾಯಿತಿ) ನಡೆಸಿದ ನಕ್ಸಲರು ಒಂದೇ ಕುಟುಂಬದ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರಿಗೆ ಮರಣದಂಡನೆ ವಿಧಿಸಿ ಗುಂಡಿಕ್ಕಿ ಸಾಯಿಸಿದ್ದಾರೆ. ನಂತರ ಶವಗಳನ್ನು ನೇಣುಹಾಕಿದ್ದಾರೆ. ಮಾವೋವಾದಿ ಹೋರಾಟಗಾರರ ವಿರುದ್ಧ ಸಂಚು ನಡೆಸಿ ಅವರ ಹತ್ಯೆಗೆ ಈ ನಾಲ್ವರು ಕಾರಣರಾಗಿದ್ದರು. ಅವರಿಗೆ ತಕ್ಕ ಶಿಕ್ಷೆಯಾಗಿದೆ ಎಂದು ಮನೆಯ ಮುಂದೆ ಫಲಕ ಕೂಡ ಹಾಕಿದ್ದಾರೆ. ಇಷ್ಟಲ್ಲದೆ ಹತ್ಯೆ ಮಾಡಿದವರ ಮನೆಯನ್ನೂ ಸ್ಫೋಟಿಸಿದ್ದಾರೆ.

ಸರಜೂ ಭೋಕ್ತ ಎಂಬುವರ ಮಗ ಸತ್ಯೇಂದ್ರ ಸಿಂಗ್ ಭೋಕ್ತ, ಮಹೇಂದ್ರ ಸಿಂಗ್ ಭೋಕ್ತ ಮತ್ತು ಅವರು ಹೆಂಡತಿಯರ ಕೈ ಮತ್ತು ಕಣ್ಣಿಗೆ ಬಟ್ಟೆ ಕಟ್ಟಿ ಗುಂಡಿಕ್ಕಿ ಕೊಂದು ಹೆಣವನ್ನು ಅವರ ಮನೆಯ ಮುಂದೆಯೇ ನೇಣುಹಾಕುವ ಮೂಲಕ ಮಾವೋವಾದಿಗಳು ಪ್ರತೀಕಾರ ತೀರಿಸಿಕೊಂಡಿದ್ದಾರೆ.

ಅಮರೇಶ್ ಕುಮಾರ್, ಸೀತಾ ಕುಮಾರ್, ಶಿವಪೂಜನ್ ಕುಮಾರ್ ಮತ್ತು ಉದಯ ಕುಮಾರ್ ಎಂಬ ನಕ್ಸರಿಗೆ ವಿಷ ಉಣಿಸಿ ಸಾಯಿಸಲಾಗಿತ್ತು ಇದರಲ್ಲಿ ಸರಜೂ ಭೋಕ್ತ ಅವರ ಕುಟುಂಬದ ಕೈವಾಡ ಇದೆ. ಇವರಿಗೆ ತಕ್ಕ ಶಾಸ್ತಿ ಆಗಿದೆ ಎಂದು ನಕ್ಸರಲು ಫಲಕದಲ್ಲಿ ಬರೆದಿದ್ದಾರೆ.

ತಮ್ಮ ಸಹಚರರ ಬಗ್ಗೆ ಭೋಕ್ತ ಕುಟುಂಬದವರು ಮಾಹಿತಿ ನೀಡಿದ್ದರಿಂದ ಮೊನೊಬಾರ್ ಗ್ರಾಮದಲ್ಲಿ ವರ್ಷದ ಹಿಂದೆ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ನಾಲ್ವರು ಹೋರಾಟಗಾರರು ಸಾವನ್ನಪ್ಪಿದ್ದರು ಎಂದೂ ನಕ್ಸಲರು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ‘ಕಾಂಗರೂ ಕೋರ್ಟ್’ ನಡೆಸಿ ಕೌರ್ಯ ಪ್ರದರ್ಶಿಸಲಾಗಿದೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Malnutrition: ಭಾರತದಲ್ಲಿ 33 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಆರ್‌ಟಿಐ ಅಡಿ ಮಾಹಿತಿ ಬಹಿರಂಗ