ಚಿಕ್ಕಮಗಳೂರು: ಯಗಚಿ ನದಿಯ ಒತ್ತುವರಿಯಾಗಿರುವ ಜಾಗಗಳ ಸರ್ವೆ ನಡೆಸಿ ಒತ್ತುವರಿ ನಡೆಸಿರುವ ವ್ಯಕ್ತಿಗಳಿಗೆ ಕಾನೂನುಬದ್ಧ ಕ್ರಮ ಜರುಗಿಸಲು ನೋಟಿಸ್ ನೀಡಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಆನಂದ್ ಸುದ್ಧಿಗಾರರಿಗೆ ತಿಳಿಸಿದ್ದಾರೆ.

ತೆರವು ಕಾರ್ಯಾಚರಣೆಗೆ ಸೋಮವಾರದಿಂದ ಚಾಲನೆ ನೀಡಲಿದ್ದಾರೆ ಎಂದು ನಗರಸಭೆ, ಸಣ್ಣ ನೀರಾವರಿ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ವಿಚಾರ ವಿನಿಮಯ ಮಾಡಿದರು.   ಒತ್ತುವರಿ ಮಾಡಿದ್ದ ಕಟ್ಟಡ, ಷೆಡ್ ಗಳನ್ನು ನಿಯಮದಂತೆ ನೋಟಿಸ್ ನೀಡಿ ನಂತರ ತೆರವುಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಆವರಣದಲ್ಲಿ ನಡೆಸಿದ ಸಭೆಯಲ್ಲಿ ತಿಳಿಸಿದ್ದಾರೆ.

ಸರ್ವೆಯ ಅಧಿಕಾರಿಗಳ ನಕ್ಷೆ ಅನುಸರಿಸಿ, ಯಗಚಿ ಭಾಗದ ಬಫರ್ ಝೋನ್ ಒತ್ತುವರಿ ತಡೆಯಲು ಕಾರ್ಯಾಚರಣೆ ನಡೆಯಲಿದ್ದು, ಪ್ರಭಾವಿ ವ್ಯಕ್ತಿಗಳು ಒತ್ತುವರಿ ನಡೆಸಿದ್ದಲ್ಲಿ ಸಹ ಕಾನೂನಿನ ಪ್ರಕಾರ ಕಾರ್ಯಾಚರಣೆ ನಡೆಸುವುದಾಗಿ ನಗರ ಸಭೆ ಪೌರಾಯುಕ್ತ ಬಿ ಸಿ ಬಸವರಾಜ್ ತಿಳಿಸಿದ್ದಾರೆ.

ಹೈಟೆನ್ಷನ್ ವಿದ್ಯುತ್ ತಂತಿ ಇರುವ ಕಡೆ ಇದ್ದ ಕಟ್ಟಡವನ್ನು ರಾಮನಹಳ್ಳಿಯಲ್ಲಿ ತೆರವುಗೊಳಿಸಲಾಗಿದೆ ಎಂದು ಸಹ ಅವರು ಹೇಳಿದರು.  ಇದೇ ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಸದಸ್ಯ ಶಿವಕುಮಾರ್, ನಗರಸಭೆ ಇಂಜಿನಿಯರ್ ಚಂದನ್ ಸೇರಿದಂತೆ ಅಧಿಕಾರಿ ವರ್ಗದವರು  ಭಾಗವಹಿಸಿದ್ದರು.