ಬೆಂಗಳೂರು (ಕನ್ನಡನಾಡಿ ಸುದ್ದಿಜಾಲ):  ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸಿ ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಪರಸ್ಪರ ವಿಚಾರ ವಿನಿಮಯ ನಡೆಸದೆ ಕ್ರಮಕೈಗೊಂಡಿರುವುದು ಸರ್ವಾಧಿಕಾರಿ ನಿಲುವು. ದೇಶದ ಒಕ್ಕೂಟ ತತ್ವಕ್ಕೆ ಮಾಡಿರುವ ಅವಮಾನ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಬಡವರ, ಮಧ್ಯಮ ವರ್ಗದವರ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಕನಸಿಗೆ ನೇರವಾಗಿ ಬೆಂಕಿ ಇಡುವ ಪ್ರಕ್ರಿಯೆಯ ಭಾಗವಾಗಿ ಈ ನೀತಿ ಜಾರಿಗೊಳಿಸಲಾಗುತ್ತಿದೆ’ ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

ಈಗಾಗಲೇ ಹಲವಾರು ತೊಡಕುಗಳು ಎದುರಾಗಿದ್ದು ಇವುಗಳನ್ನು ಸಹ ಇನ್ನೂ ಸರಿಪಡಿಸಿಲ್ಲಎಂದು ದೂರಿದ್ದಾರೆ.  ಜಗತ್ತಿನಾದ್ಯಂತ ಯಾವ ದೇಶಗಳಲ್ಲೂ ಇಲ್ಲದ ಕಲಿಕಾ ಕ್ರಮವನ್ನು ಸದರಿ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ. ಇಂತಹ ನೀತಿ ಅಳವಡಿಸಿ, ವಿಶ್ವವಿದ್ಯಾಲಯಗಳನ್ನು ದೂರ ಶಿಕ್ಷಣ ಕೇಂದ್ರಗಳಂತೆ ಮಾಡಲಾಗುತ್ತಿದೆ’ ಎಂದೂ ಟೀಕಿಸಿದ್ದಾರೆ.