ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಕೃಷಿ ಖಾತೆಯಂತಹ ಮಹತ್ವದ ಜವಾಬ್ದಾರಿ ನೀಡಿದ್ದು ರೈತರು ಹಾಗೂ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಜಿಲ್ಲಾ ಬಿಜೆಪಿಯ ಪಾಂಚಜನ್ಯ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ದೇಶದಲ್ಲಿ ರೈತರು ಸ್ವಾವಲಂಬಿಗಳಾಗಬೇಕು, ಉತ್ಪಾದನೆಯನ್ನು ಹೆಚ್ಚಿಸಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ೬ ವರ್ಷದ ಅವಧಿಯಲ್ಲಿ ಮಹತ್ವಾಕಾಂಕ್ಷಿ ರೈತ ಪರವಾದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.

ಯುಪಿಎ ಅವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ ಇದ್ದ ಬಜೆಟ್ ಅನುದಾನವನ್ನು ಇಮ್ಮಡಿಗೊಳಿಸಿದ್ದಾರೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೃಷಿ ಸಂಶೋಧನೆ, ಬಿತ್ತನೆ ಬೀಜಗಳು, ಮಾರುಕಟ್ಟೆ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಿದೆ, ಆತ್ಮನಿರ್ಭರ, ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಭೀಮಾ ಯೋಜನೆ, ಕೃಷಿಸಿಂಚಾಯಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ದೇಶದಲ್ಲಿ ಶೇ ೮೫ ರಷ್ಟು ಸಣ್ಣ ಹಾಗೂ ಮಧ್ಯಮ ರೈತರುಗಳು ಇದ್ದು ಕಿಸಾನ್ ಸಮ್ಮಾನ್ ಯೋಜನೆ ಅಡಿ ೨೧ ಕೋಟಿ ರೈತರಿಗೆ ಹಣ ಬಿಡುಗಡೆಗೊಳಿಸಲಾಗಿದೆ. ರೈತರ ಬೆಳೆ ಹಾನಿ, ವಿಮೆಗೆ ಸಂಬಂಧಿಸಿದಂತೆ, ಬೆಳೆ ಸಮೀಕ್ಷೆಗೆ ರೈತರಿಗೆ ಅವಕಾಶ ನೀಡಿದೆ, ದೇಶದಲ್ಲಿ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿಯೂ ಕೃಷಿ ಕ್ಷೇತ್ರದಲ್ಲಿ ಜಿಡಿಪಿ ಶೇ ೨೦ ರಷ್ಟು ಹೆಚ್ಚಿದೆ ಎಂದರು.

ಆಹಾರ ಪದಾರ್ಥಗಳನ್ನು ರಫ್ತು ಮಾಡುವ ದೇಶಗಳ ಪೈಕಿ ಭಾರತ ೯ನೇ ಸ್ಥಾನದಲ್ಲಿದೆ, ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಿಗೆ ಹನಿನೀರಾವರಿಯನ್ನು ಸಬ್ಸಿಡಿದರದಲ್ಲಿ ನೀಡಲು ತೀರ್ಮಾನಿಸಲಾಗಿದೆ, ರಾಜ್ಯದಲ್ಲಿ ತೆಂಗು ಬೆಳೆಗೆ ಹೆಚ್ಚು ಪ್ರೋತ್ಸಾಹ ನೀಡಿ, ವಿದೇಶಗಳಿಗೆ ರಫ್ತು ಮಾಡಲು ಕ್ರಮವಹಿಸಲಾಗುವುದು, ಕೃಷಿ ಉತ್ಪಾದಕ ಸಂಘ ಸಂಸ್ಥೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಆಹಾರ ಸಂಸ್ಕರಣಾಘಟಕ, ಶೀತ ಸಂಗ್ರಹ ಘಟಕ, ಸೇರಿದಂತೆ ಸಣ್ಣ ಮತ್ತು ಮಧ್ಯಮ ರೈತರಿಗೆ ಸಾಲ ಸೌಲಭ್ಯದ ಮೂಲಕ ಕೃಷಿಗೆ ಹೆಚ್ಚು ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.

ದೇಶದಲ್ಲಿ ರೈತರು ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬನೆ ಸಾಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವನ್ನು ಈಡೇರಿಸಬೇಕಿದೆ. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರ ಏಳಿಗೆಗೆ ಹೊಸ ನೀತಿಗಳ ಮೂಲಕ ಅಭಿವೃದ್ಧಿಗೆ ಪಣತೊಟ್ಟಿದೆ ಎಂದರು.

ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಆರಂಭಕ್ಕೆ ಚಿಂತನೆ ನಡೆದಿದೆ, ಜೊತೆಗೆ ಹೊಸಕೋಟೆಯಲ್ಲಿ ಸ್ಪೈಸ್ ಪಾರ್ಕ್ ನಿರ್ಮಾಣ ಮಾಡಲು ಜಾಗ ಮೀಸಲಿರಿಸಲಾಗಿದೆ, ನಾನು ಕೂಡ ರೈತನ ಮಗಳಾಗಿದ್ದು ರೈತರು, ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ನನ್ನ ಏಳಿಗೆಗೆ ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರ ಶ್ರಮ ಅಪಾರ ಎಂದು ಸ್ಮರಿಸಿದರು.

ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಪ್ರಾಸ್ತಾವಿಕ ಮಾತನಾಡಿ ಜಿಲ್ಲೆಯು ಕೈಗಾರಿಕೆಗಳ ಬದಲಾಗಿ ಕೃಷಿ ಮತ್ತು ತೋಟಗಾರಿಕೆಯನ್ನು ಹೆಚ್ಚಾಗಿ ಅವಲಂಬಿಸಿದೆ. ಕ್ಷೇತ್ರದ ಸಮಸ್ಯೆಗಳನ್ನು ಶೋಭಾ ಕರಂದ್ಲಾಜೆಯವರು ಚೆನ್ನಾಗಿ ತಿಳಿದಿದ್ದು ಬಗೆಹರಿಸಲು ಶ್ರಮಿಸಲಿದ್ದಾರೆ ಎಂದರು.

ಮಲೆನಾಡು ಬಯಲು ಸೀಮೆ ಒಳಗೊಂಡಂತೆ ಈರುಳ್ಳಿ, ಆಲೂಗಡ್ಡೆ, ಕಾಫಿ, ಅಡಕೆ, ತೆಂಗು ಬೆಳೆಯುವ ರೈತರು, ಬೆಳೆಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಜಿಲ್ಲೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ತರೀಕೆರೆಯ ಬಾವಿಕೆರೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಆರಂಭಕ್ಕೆ ಚಿಂತನೆ ನಡೆಸಿದ್ದು ಆದಷ್ಟು ಬೇಗ ಅನುಮೋದನೆ ದೊರಕಿಸಿ ಕಾಮಗಾರಿ ಆರಂಭಿಸುವಂತೆ ತಿಳಿಸಿದರು.

ಈ ವೇಳೆ ಬಿಜೆಪಿಯ ಮಹಿಳಾ ಮೋರ್ಚಾ, ಎಸ್‌ಸಿ ಮೋರ್ಚಾ, ಒಳಗೊಂಡಂತೆ ವಿವಿಧ ಮೋರ್ಚಾದ ಅಧ್ಯಕ್ಷರು, ಮುಖಂಡರುಗಳು, ಹಾಗೂ ಕಾರ್ಯಕರ್ತರುಗಳು ನೂತನ ಕೃಷಿ ಸಚಿವರನ್ನು ಅಭಿನಂದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸಪೂಜಾರಿ, ತರೀಕೆರೆ ಶಾಸಕ ಡಿ.ಎಸ್.ಸುರೇಶ್, ಕಡೂರು ಶಾಸಕ ಬೆಳ್ಳಿಪ್ರಕಾಶ್, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಎಂಎಲ್‌ಸಿ ತುಳಸಿಮುನಿರಾಜುಗೌಡ, ಚಿಕ್ಕಮಗಳೂರು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ, ನಗರ ಮಂಡಲ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಮುಖಂಡರುಗಳಾದ ಪ್ರೇಮ್‌ಕುಮಾರ್, ದೀಪಕ್‌ದೊಡ್ಡಯ್ಯ, ಸೀತಾರಾಮ ಭರಣ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.