ನವದೆಹಲಿ: ಬ್ಯಾಟರ್ ವಿರಾಟ್ ಕೊಹ್ಲಿ ಅವರ ಗುಣಮಟ್ಟದ ಆಟ ಮತ್ತು ಸಂಕಷ್ಟದ ಸಂದರ್ಭದಲ್ಲಿ ಆಡಿದ ಅನುಭವದ ಅಗತ್ಯ ತಂಡಕ್ಕೆ ತುಂಬಾ ಇದೆ ಎಂದು ಏಕದಿನ, ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

‘ಬ್ಯಾಟರ್ ಆಗಿ ಕೊಹ್ಲಿ ಅವರ ಗುಣಮಟ್ಟದ ಆಟ ತಂಡಕ್ಕೆ ಯಾವಾಗಲೂ ಅಗತ್ಯವಿದೆ. ಟ್ವೆಂಟಿ–20 ಮಾದರಿಯಲ್ಲಿ 50ಕ್ಕೂ ಹೆಚ್ಚು ರನ್‌ಗಳ ಸರಾಸರಿ ಹೊಂದುವುದು ಅಸಾಧಾರಣವಾದದ್ದು. ಅನೇಕ ಬಾರಿ ತಂಡವು ಸಂಕಷ್ಟದ ಸಂದರ್ಭದಲ್ಲಿದ್ದಾಗ ಅವರು ಪಾರುಮಾಡಿದ್ದಾರೆ’ ಎಂದು ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ರೋಹಿತ್ ಹೇಳಿದ್ದಾರೆ.

ಇದನ್ನೂ ಓದಿ: ಟ್ವೆಂಟಿ–20 ಆಯ್ತು, ಇನ್ನು ಏಕದಿನ ಕ್ರಿಕೆಟ್‌ಗೂ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕ

‘ಅಂಥ ಬ್ಯಾಟರ್ ತಂಡಕ್ಕೆ ಬೇಕಾಗಿದ್ದಾರೆ. ಇಷ್ಟೇ ಅಲ್ಲದೆ, ವಿರಾಟ್ ಅವರು ಈಗಲೂ ತಂಡದ ನಾಯಕನೇ ಆಗಿದ್ದಾರೆ. ಈ ಎಲ್ಲ ವಿಚಾರಗಳನ್ನು ಗಮನಿಸಿದರೆ ಅವರನ್ನು ನೀವು ತಂಡದಿಂದ ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ಅವರ ಉಪಸ್ಥಿತಿ ತಂಡಕ್ಕೆ ಬಹು ಮುಖ್ಯವಾದದ್ದು’ ಎಂದು ಅವರು ಹೇಳಿದ್ದಾರೆ.

ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಅವರನ್ನು ಏಕದಿನ ಮಾದರಿಯ ಕ್ರಿಕೆಟ್‌ ತಂಡಕ್ಕೂ ನಾಯಕನನ್ನಾಗಿ ಆಯ್ಕೆ ಮಾಡಿ ಡಿಸೆಂಬರ್ 8ರಂದು ಬಿಸಿಸಿಐ ಘೋಷಣೆ ಮಾಡಿತ್ತು.

ಇದನ್ನೂ ಓದಿ: ಏಕದಿನ ಕ್ರಿಕೆಟ್‌: ಟೀಂ ಇಂಡಿಯಾಗೆ ಕನ್ನಡಿಗ ಕೆ.ಎಲ್.ರಾಹುಲ್‌ ಉಪನಾಯಕ?