ಇತ್ತೀಚಿನ ದಿನಗಳಲ್ಲಿ ಸಾಮಾಜಿಕವಾಗಿ ನೀವು ಗುರುತಿಸಿಕೊಂಡಿದ್ದರೆ ‘ನೀವು ಯಾವ ಪಂಥ?’ ಎಂಬ ಪ್ರಶ್ನೆಯೊಂದು ಹಠಾತ್ತನೆ ಎದುರಾಗುತ್ತಿದೆ. ಯಾವುದೇ ವ್ಯಕ್ತಿ ಪ್ರಚಲಿತ ವಿದ್ಯಮಾನಗಳ ಕುರಿತು ತನ್ನ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳತೊಡಗಿದರೆ ಅಂತವರನ್ನು ಒಂದು ಪಂಥದೊಡನೆ ಗುರುತಿಸುವಿಕೆ ನಡೆಯುತ್ತಿದೆ.-ಈ ಗಂಭೀರ ರಾಜಕೀಯ-ಸಾಮಾಜಿಕ-ಡಿಜಿಟಲ್ ಬೆಳವಣಿಗೆಯಿಂದ ಹೊರತಾಗಿ ನಮ್ಮ ಪಾಡಿಗೆ ಯಾರಿಗೋ ಲಾಭ ತಂದೊಡ್ಡಬಹುದಾದ ಪಂಥಗಳಿಗೆ ಸಿಕ್ಕಿಬೀಳದೇ, ನಡುಪಂಥೀಯವೂ ಅಲ್ಲದೇ ಬೇರೆಯದನ್ನೇ ಕಂಡುಕೊಳ್ಳಬಹುದು ಎಂದು ಹೊಸ ಮಾರ್ಗವೊಂದನ್ನು ತೆರೆದಿಟ್ಟಿದ್ದಾರೆ ಕಥೆಗಾರ ಮಧು ವೈಎನ್ ಅವರು. ಅವರು ತಮ್ಮ ಫೇಸ್‌ಬುಕ್ ಗೋಡೆಯಲ್ಲಿ ಬರೆದಕೊಂಡ ಬರಹವನ್ನು ಕನ್ನಡನಾಡಿ ಜಾಲತಾಣ ಅತ್ಯಂತ ಕೃತಜ್ಞತಾಪೂರ್ವಕವಾಗಿ ಪ್ರಕಟಿಸುತ್ತಿದೆ.

ನಾವು ನಡುಪಂಥೀಯರಲ್ಲ, ನೇರಪಂಥೀಯರು
ಎಡ ಮತ್ತು ಬಲದವರಿಗೆ ನಮ್ಮನ್ನು ಕಂಡರೆ ಯಾಕೆ ಉರಿಯುತ್ತದೆ ಅಂದರೆ ನಾವು ಕಣ್ಣು ಮಂಜಾಗುವ ಹಂತಕ್ಕೆ ನೋಡುವುದನ್ನು ನಿಲ್ಲಿಸಿ ಕಂಡಿದ್ದನ್ನು ಕಂಡಂತೆ ಆಡುತ್ತೇವೆ, ಪ್ರೋತ್ಸಾಹಿಸುತ್ತೇವೆ ಅಥವಾ ವಿರೋಧಿಸುತ್ತೇವೆ. ಮಂಜಿನ ದೃಷ್ಟಿಯಿಂದ ನೋಡಿ ಕದರಿಕೊಂಡ ಮಾತು ಆಡುವುದಿಲ್ಲ. ನಡುಪಂಥೀಯರು ಎಂದರೆ ಅದಕ್ಕೂ ಹೌದು ಇದಕ್ಕೂ ಹೌದು ಎನ್ನುವವರು. ನೇರಪಂಥೀಯರಿಗೂ ನಡುಪಂಥೀಯರಿಗೂ ವ್ಯತ್ಯಾಸವಿದೆ. ನಡುಪಂಥೀಯರ ಅಭಿಪ್ರಾಯ ಅತ್ತ ಇತ್ತ ತುಯ್ಯುತ್ತಿರುತ್ತದೆ. ದೃಢವಾಗುವ ಮುನ್ನ ಮೆದುವಾಗುತ್ತದೆ. ಅವರಿಗೆ ಎಲ್ಲರಿಂದಲೂ ಒಳ್ಳೆಯವನೆನಿಸಿಕೊಳ್ಳುವುದು ಮುಖ್ಯವಾಗುತ್ತದೆ ಹಾಗಾಗಿ ಎಲ್ಲರ ಹೆಗಲ ಮೇಲೆ ಕೈಹಾಕುತ್ತಾರೆ. ನೇರಪಂಥೀಯರು ಹಾಗಲ್ಲ. ಅವರಿಗೆ ದೃಢವಾದ ನಂಬಿಕೆ ನಿರ್ಧಾರಗಳು ಇರುತ್ತವೆ. ಅವರೂ ಎಲ್ಲರ ಹೆಗಲ ಮೇಲೆ ಕೈಹಾಕುತ್ತಾರೆ ಕಾರಣ ಎಲ್ಲರೊಂದಿಗೆ ಸದಾ ಸಂವಾದ ಇಟ್ಟುಕೊಳ್ಳ ಬಯಸುತ್ತಾರೆ, ಸೇತುವೆ ನಿರ್ಮಿಸಲು ಹೆಣಗುತ್ತಾರೆ. ನಡುಪಂಥೀಯರು ಎಲ್ಲಿರುತ್ತಾರೊ ಅಲ್ಲಿದ್ದ ಪ್ರೇಕ್ಷಕರ ಪರ ಒಲವು ವ್ಯಕ್ತಪಡಿಸುತ್ತಾರೆ. ನೇರಪಂಥೀಯರು ಆ ಕ್ಷಣದಲ್ಲಿ ಎಲ್ಲಿರುತ್ತಾರೋ ಅವರ ವಿರುದ್ಧ ಮಾತನಾಡುತ್ತಾರೆ. ಈ ದೃಷ್ಟಿಯಲ್ಲಿ ಎಡ ಮತ್ತು ಬಲದವರು ನಡುಪಂಥೀಯರಿಗಿಂತ ಬ್ರಷ್ಟ. ತಮ್ಮ ಪ್ರೇಕ್ಷಕರು ಶಿಳ್ಳೆ ಹೊಡೆಯುವಂತೆ ನಡೆದುಕೊಳ್ಳುವುದರಲ್ಲಿ ಅವರಿಗೆ ಆಸಕ್ತಿ.

ಎಡ ಮತ್ತು ಬಲದವರು ತಮ್ಮ ಕಡೆಯವರು ಹೇಸಿಗೆ ತಿಂದರೂ ಸಮರ್ಥಿಸಿಕೊಳ್ಳುತ್ತಾರೆ. ವಿರೋಧಿಗಳು ವೈಯುಕ್ತಿಕ ಜೀವನದಲ್ಲಿ ಎಡವಿದರೂ ಸಾರ್ವಜನಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಾರೆ. ನೇರಪಂಥೀಯರು ಸಾರ್ವಜನಿಕ ವಿಚಾರಗಳನ್ನು ಮಾತ್ರ ಸಾರ್ವಜನಿಕ ಚರ್ಚೆಗೆ ಒಳಪಡಿಸುತ್ತಾರೆ ಮತ್ತು ಯಾರ ಕಡೆಯವರು ಹೇಸಿಗೆ ತಿಂದರೂ ನಿರ್ಭಿಡೆಯಿಂದ ಮಕ್ಕುಗಿಯುತ್ತಾರೆ. ತಮ್ಮನ್ನು ತಾವು ನಿರಂತರ ವಿಮರ್ಶೆ ಮಾಡಿಕೊಳ್ಳುತ್ತಿರುತ್ತಾರೆ. ಮೋಸ್ಟ್‌ ಸೆಲ್ಫ್‌ ಕ್ರಿಟಿಕಲ್‌ ಇರುತ್ತಾರೆ.

ಎಡ ಮತ್ತು ಬಲದವರು ಅನುದಿನ ಬೆಳಗಿಂದ ಸಂಜೆತನಕ ಆಡಿದ್ದೇ ಆಡುತ್ತಿರುತ್ತಾರೆ. ನೇರಪಂಥೀಯರು ಮಾತಿಗೆ ಬೆಲೆಯೆಷ್ಟೋ ಮೌನಕ್ಕೂ ಅಷ್ಟೇ ಬೆಲೆ ಕೊಡುತ್ತಾರೆ. ಗಂಭೀರ ಸ್ಥಿತಿಗಳಲ್ಲಿ ಮೌನ ಮುರಿಯುತ್ತಾರೆ.
ಎಡ ಮತ್ತು ಬಲ ಅವರವರ ಸಿದ್ಧಾಂತಗಳಿಗೆ ಜೋತು ಬಿದ್ದಿರುತ್ತಾರೆ. ಕಡು ಸೈದ್ಧಾಂತಿಕ ಧಾರ್ಮಿಕರಿರುತ್ತಾರೆ. ಫಂಡಮೆಂಟಲಿಸ್ಟುಗಳಾಗಿರುತ್ತಾರೆ. ನೇರಪಂಥೀಯರು ಸರಿ ತಪ್ಪುಗಳನ್ನು ಸದಾ ತೂಗುತ್ತಿರುತ್ತಾರೆ, ಬದಲಾವಣೆಗೆ ತೆರೆದುಕೊಂಡಿರುತ್ತಾರೆ. ತಮಗೆ ಹೊಳೆದ ಸತ್ಯಗಳನ್ನು ಅಂದಿಗಂದಿಗೆ ಅರುಹುತ್ತಿರುತ್ತಾರೆ. ಎಲ್ಲರ ಭಾವನೆಗಳನ್ನು ಗೌರವಿಸುತ್ತಾರೆ. ತಾರ್ಕಿಕವಾಗಿ ಆಲೋಚಿಸಿ ಯಾವ ನಡೆ/ನಿರ್ಧಾರ ಬಹುಜನರಿಗೆ, ಪ್ರಕೃತಿಗೆ, ಜೀವ ಅಜೀವ ಸಮಸ್ತ ಸೃಷ್ಟಿ ಕುಲಕ್ಕೆ ಒಳಿತೆಂದು ಯೋಚಿಸುತ್ತಾರೆ, ಮತ್ತು ಹಿಂಜರಿಕೆಯಿಲ್ಲದೆ ಪ್ರಕಟಿಸುತ್ತಾರೆ. ಇವರಿಗೆ ಎಡ ಬಲಗಳ ಹುಳುಕುಗಳು ಮತ್ತು ಐಂದ್ರಿಕ ಜಾಲಗಳು ವಿಸ್ತಾರವಾಗಿ ತಿಳಿದಿರುತ್ತವೆ.

ಇನ್ನಷ್ಟು ಸೇರಿಸಬಹುದು. ಸರಳವಾಗಿ ಸಂಕ್ಷಿಪ್ತವಾಗಿ ಹೇಳುವುದೆಂದರೆ ನೇರಪಂಥೀಯತೆ ಕಲೆಯ ಮೂಲಗುಣ. ಇದು ಸದಾ ಎಲ್ಲರೊಂದಿಗೆ ಜಗಳವಾಡುತ್ತಿರುತ್ತದೆ. ಎಲ್ಲರೊಂದಿಗೆ ಸಮನ್ವಯ ಸಾಧಿಸಲು ಹೆಣಗುತ್ತಿರುತ್ತದೆ. ಸೂಕ್ಷ್ಮ ಹೃದಯದಾಗಿರುತ್ತದೆ. ಕೆರಳುತ್ತದೆ. ಎಡಕ್ಕೋ ಬಲಕ್ಕೋ ತನ್ನನ್ನು ಮಾರಿಕೊಂಡಿರುವುದಿಲ್ಲ. ತನಗನಿಸಿದ ನಿಜವನ್ನೆ ನುಡಿಯುತ್ತಿರುತ್ತದೆ. ಲಾಭ ನಷ್ಟಗಳ ಲೆಕ್ಕ ಹಾಕುವುದಿಲ್ಲ. ನಡುಪಂಥೀಯದಂತೆ ಅತಿಲಾಭವಿಲ್ಲ(over profit), ಎಡ ಬಲಗಳಂತೆ ನಿರ್ದಿಷ್ಟ ಲಾಭಗಳಿಲ್ಲ(fixed profit). ಸದಾ ನಷ್ಟದಲ್ಲಿ ವ್ಯವಹಾರ ನಡೆಸುವ ಅತ್ಯಂತ ಜೀವನಪ್ರೀತಿಯ ಪಂಥ ನೇರಪಂಥ.

ನಮ್ಮ ಪಂಥದಲ್ಲಿ ಕೆಲವೇ ಕೆಲವು ಜನರಿರುತ್ತೇವೆ. ನಮ್ಮಲ್ಲಿ ಗುಂಪುಗಾರಿಕೆ ಇರುವುದಿಲ್ಲ. ಒಂದೆಡೆ ಸೇರುವುದಿಲ್ಲ. ಇದ್ದಲ್ಲೆ ಕಾರ್ಯನಿರತರಾಗಿರುತ್ತೇವೆ. ನಾವು ಒಳಗೊಳಗೆ ಕಚ್ಚಾಡುವಷ್ಟು ದುರ್ಬಲರಲ್ಲ. ಒಳ್ಳೆಯ ಕೆಟ್ಟ ಎಲ್ಲದಕ್ಕೂ ಪರಸ್ಪರ ಬೆನ್ನಿಗೆ ನಿಂತು ದೊಂಬಿಗೂಡವ ಬ್ರಷ್ಟರಲ್ಲ. ನಾವು ಇಂಡಿವಿಡ್ಯುವಲ್ಲುಗಳು. ಸಂಘವಿಲ್ಲ, ಸಹಕಾರವಿಲ್ಲ, ಪಕ್ಷವಿಲ್ಲ. ಸ್ವತಂತ್ರ ನಿಲ್ಲಬಲ್ಲ ಶಕ್ತಿಯುಳ್ಳವರು. ಅಕಾಶದಲ್ಲಿರುವ ನಕ್ಷತ್ರಗಳಂತೆ. ಇರುವುದು ದೂರ ದೂರ. ಒಬ್ಬರಿಗೊಬ್ಬರು ಸಂಬಂಧ ಬೆಳೆಸಿರುವುದಿಲ್ಲ. ಸ್ವತಂತ್ರವಾಗಿ ಲೋಕವನ್ನು ಬೆಳಗುವುದಿಲ್ಲ. ಒಟ್ಟಾರೆ ಜಗತ್ತಿಗೆ ಮಬ್ಬೆಳಕನ್ನಾದರೂ ಸೂಸುತ್ತ ಚಲನೆಯನ್ನು ಕಾಪಾಡುವುದು ನಮ್ಮ ಧರ್ಮ. ಅಲ್ಲಲ್ಲೆ ಆಗಾಗ್ಗೆ ಸ್ವತಂತ್ರವಾಗಿ ಸಿಡಿಯುವುದು ನಮಗಿಷ್ಟ. ನಾವು ಯಾರಿಗೂ ಸಲ್ಲದವರು. ಸಲ್ಲಲು ಇಷ್ಟಪಡದವರು.

ಇದನ್ನೂ ಓದಿ: ಹಲವು ಗಣ್ಯರಿಂದ ಸಂವಿಧಾನ ದಿನದ ಸ್ಮರಣೆ; ಇಲ್ಲಿದೆ ಸಂಕ್ಷಿಪ್ತ ಮಾಹಿತಿ