ಚಿಕ್ಕಮಗಳೂರು: ದೇಶದ ಚಿಂತನೆ, ಸಂಘಟನೆ, ಹೋರಾಟ, ಸ್ವದೇಶಿ ವ್ಯಾಮೋಹ ಮುಂತಾದ ಭಾವನೆಗಳು ಡಾ. ನಾ.ಸು ಹರ್ಡೀಕರ್‌ರವರ ವ್ಯಕ್ತಿತ್ವವನ್ನು ಪ್ರಕರಗೊಳಿಸಿದ್ದವು ಎಂದು ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಹೇಳಿದರು.

ಅವರು ಇಂದು ನಗರದ ಭಾರತ ಸೇವಾದಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ನಾ.ಸು ಹರ್ಡೀಕರ್‌ರವರ ೧೩೫ ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಹರ್ಡೀಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಭಾರತ ಸೇವಾದಳದ ಸಂಸ್ಥಾಪಕರಾಗಿದ್ದ ನಾ.ಸು ಹರ್ಡೀಕರ್‌ರವರು ಸ್ವತಂತ್ರ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರೊಂದಿಗೆ ಪ್ರಮುಖ ಪಾತ್ರ ವಹಿಸಿದ್ದರು. ಸತ್ಯ, ಅಹಿಂಸೆ, ದೇಶಪ್ರೇಮ, ಸಂಘಟನಾ ವೈಖರಿ ಹಾಗೂ ಧೈರ್ಯ ಭಾರತ ಸ್ವಾತಂತ್ರ ವೀರರಿಗೆ ಮಾರ್ಗದರ್ಶಿಯಾಯಿತು ಎಂದು ತಿಳಿಸಿದರು.

೧೯೩೨ ರಿಂದ ೧೯೩೭ ರವರೆಗೆ ರಾಷ್ಟ್ರದಲ್ಲಿ ೨ಲಕ್ಷ ಸ್ವಯಂಸೇವಕರನ್ನು ಭಾರತ ಸೇವಾದಳದ ಮೂಲಕ ಸ್ವಾತಂತ್ರ ಸಂಗ್ರಾಮಕ್ಕೆ ತರಬೇತಿ ನೀಡಿ ಸಜ್ಜುಗೊಳಿಸಲಾಯಿತು. ಸದಾ ಖಾದಿ ವಸ್ತ್ರದಾರಿಯಾಗಿದ್ದ ಡಾ. ಹರ್ಡೀಕರ್ ಗಾಂಧಿ ಟೋಪಿ, ಬಿಳಿ ಅರ್ಧ ತೋಳಿನ ಅಂಗಿ, ನೀಲಿ ಚಡ್ಡಿ ಹಾಗೂ ಚಪ್ಪಲಿ ಧರಿಸುವಿಕೆ ಅವರಲ್ಲಿರುವ ಸರಳತೆ ಮತ್ತು ಸ್ವದೇಶಿ ವ್ಯಾಮೋಹ ಪ್ರತಿಪಾದಿಸುತ್ತಿತ್ತು ಜೊತೆಗೆ ಈ ಸಮವಸ್ತ್ರದ ಗಾಂಭೀರ್ಯದಲ್ಲೇ ರಾಜ್ಯಸಭೆಗೂ ಹಾಜರಾಗುತ್ತಿದ್ದರೆಂದು ಬಣ್ಣಿಸಿದರು.

ಡಾ. ಹರ್ಡೀಕರ್‌ರವರು ಪತ್ರಿಕೋದ್ಯಮ ರಂಗದಲ್ಲಿಯೂ ತಮ್ಮಲ್ಲಿರುವ ಲೇಖನಿ ಶಕ್ತಿಯನ್ನು ಸಾರ್ವಜನಿಕವಾಗಿ ಪರಿಚಯಿಸಿ ವಾಲೆಂಟಿಯರ್ ಹುಬ್ಬಳ್ಳಿ ಗೆಜೆಟ್, ಜೈಹಿಂದ್ ಸಾಪ್ತಾಹಿಕ, ಕನ್ನಡ ಪತ್ರಿಕೆಗಳ ಸಂಪಾದಕರಾಗಿ, ಪ್ರಜಾಮತ, ವಾರ್ತಾ ಪತ್ರ, ಕೇಸರಿ ಮುಂತಾದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರೆಂದು ವಿವರಿಸಿದರು.

ಇಂದು ರಾಷ್ಟ್ರದಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳ ಅಡಿಯಲ್ಲಿ ಯುವ ಜನರನ್ನು ತರಬೇತಿಗೊಳಿಸಿ ಅವರಲ್ಲಿ ರಾಷ್ಟ್ರೀಯ ಚಾರಿತ್ರ್ಯ, ಕೋಮು ಸೌಹಾರ್ಧ, ಪರಸ್ಪರ ಸೌಹಾರ್ಧದಿಂದ ರಾಷ್ಟ್ರ ಕಟ್ಟುವ ಸದ್ಗುಣಗಳನ್ನು ಬೆಳೆಸುವ ಭಾರತ ಸೇವಾದಳ ಸಂಸ್ಥೆಗೆ ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರಿಂದ ಪಕ್ಷಾತೀತವಾಗಿ ಹೆಚ್ಚಿನ ಪ್ರೋತ್ಸಾಹ ನೀಡಿ ಡಾ. ನಾ.ಸು ಹರ್ಡೀಕರ್‌ರವರ ಸೇವಾ ಮನೋಭಾವ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಜನ್ಮದಿನದ ಶುಭಾಶಯ ತಿಳಿಸಲು ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ನರೇಂದ್ರ ಪೈ ಸೇರಿದಂತೆ ಮುಖಂಡರಾದ ನೆಟ್ಟೆಕೆರೆಹಳ್ಳಿ ಜಯಣ್ಣ, ಶೇಖ್‌ಅಲಿ, ವೀಣಾ, ಲೋಕೇಶ್ವರಾಚಾರ್, ಬಿ.ಆರ್ ಜಗದೀಶ್, ನಂಜುಂಡಪ್ಪ, ಚಂದ್ರಕಾಂತ್, ಕುಮಾರ ಸ್ವಾಮಿ, ಮೀನಾಕ್ಷಿ, ಶಶಿಕಲಾ, ಮತ್ತಿತರರು ಭಾಗವಹಿಸಿದ್ದರು.

135th birth anniversary of N. Su Hardikar