ಚಿಕ್ಕಮಗಳೂರು: ಅಬಕಾರಿ ಇಲಾಖೆಯ ಉಪ ಆಯುಕ್ತರ ಭ್ರಷ್ಟಚಾರ ಹಾಗೂ ಮಾನಸಿಕ ಕಿರುಕುಳ ನೀಡುತ್ತಿರುವುದನ್ನು ತಡೆಯುವಂತೆ ಆಗ್ರಹಿಸಿ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಇಂದು ಜಿಲ್ಲಾಡಳಿತಕ್ಕೆ ಮನವಿ ನೀಡಿದೆ.

ಜಿಲ್ಲಾಧಿಕಾರಿಗಳ ಕಚೇರಿ ಕಂದಾಯ ವಿಭಾಗದ ಶಿರಸ್ತೇದಾರ್ ಹೇಮಂತ್‌ರವರಿಗೆ ಸಂಘದ ಅಧ್ಯಕ್ಷ ಬಿ.ರಾಜಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಸಿ. ಸೆಲಿನಾರವರು ದುರುದ್ದೇಶಪೂರ್ವಕವಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಂಡು ಸುಳ್ಳು ಪ್ರಕರಣ ದಾಖಲಿಸಿ, ಪ್ರಕರಣವನ್ನು ಇತ್ಯರ್ಥಪಡಿಸುವ ಸಲುವಾಗಿ ದುಬಾರಿ ದಂಡವನ್ನು ವಿಧಿಸುವುದಾಗಿ ಮದ್ಯದಂಗಡಿಗಳ ಮಾಲೀಕರಿಗೆ ಹೆದರಿಸುತ್ತಾ ಕಡಿಮೆ ದಂಡದ ಹಣವನ್ನು ವಿಧಿಸಲು ಲಂಚದ ಹಣವನ್ನು ನೀಡಬೇಕೆಂದು ಬೇಡಿಕೆ ಇಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಯಾವ ಸನ್ನದುದಾರರು ಹಣವನ್ನು ನೀಡಲು ಒಪ್ಪುವುದಿಲ್ಲವೋ ಅಂತಹ ಸನ್ನದುದಾರರ ವಿರುದ್ಧ ೩ ಪ್ರಕರಣಗಳನ್ನು ದಾಖಲಿಸಿ ಅಂಗಡಿಯನ್ನು ಅಮಾನತ್ತು ಮಾಡಲು ಶಿಫಾರಸು ಮಾಡುವುದಾಗಿ ಬೆದರಿಸಿ ಒಪ್ಪದ ಪಕ್ಷದಲ್ಲಿ ಮೇಲಿಂದ ಮೇಲೆ ಪ್ರಕರಣ ದಾಖಲಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಜಿಲ್ಲೆಯಲ್ಲಿ ನಿಗದಿಪಡಿಸಲಾದ ರಾಜಸ್ವ ಗುರಿ ಸಾಧನೆಗಾಗಿ ಸರ್ಕಾರದ ಆಶಯಕ್ಕೆ ಸ್ಪಂದಿಸಿ ಕಾನೂನಿನ ಪ್ರಕಾರ ವ್ಯಾಪಾರ ಮಾಡುತ್ತಿದ್ದರೂ ನಮ್ಮಗಳಿಗೆ ಮಾನಸಿಕ ಹಿಂಸೆ ನೀಡಿ ಗೌರವಯುತವಾಗಿ ವ್ಯಾಪಾರ ನಡೆಸಲು ಆಗದ ವಾತಾವರಣವನ್ನು ನಿರ್ಮಿಸಿ ತಮ್ಮ ದುರುದ್ದೇಶವನ್ನು ಈಡೇರಿಸಿಕೊಳ್ಳಲು ಮೇಲಿಂದ ಮೇಲೆ ಕಚೇರಿಗೆ ಸನ್ನದುದಾರರನ್ನು ಕರೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿ ಸನ್ನದುದಾರರಿಗೆ ಜಿಗುಪ್ಸೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳ ಸಹಾಯಕರ ಹೆಸರಿನಲ್ಲಿ ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ನೀಡಬೇಕಾಗುತ್ತದೆ ಎಂದು ತಿಳಿಸಿ ನಮ್ಮಗಳಿಂದ ಸಂಗ್ರಹಿಸುತ್ತಿದ್ದಾರೆ ಚುನಾವಣೆ ವೆಚ್ಚದ ಹೆಸರಿನಲ್ಲಿ ಹಾಗೂ ಇತರೆ ವೆಚ್ಚಗಳಿರುತ್ತವೆ ಎಂದು ಹೆದರಿಸಿ ಹಣ ನೀಡಬೇಕೆಂದು ಪೀಡಿಸುತ್ತಿದ್ದಾರೆ ಎಂದಿದ್ದಾರೆ.

ಚುನಾವಣಾ ವೀಕ್ಷಕರು ಮತ್ತು ಪೊಲೀಸ್ ಅಧೀಕ್ಷಕರಿಗೆ ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ಕೊಡಬೇಕೆಂದು ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ನನಗೆ ಕೆಲವೊಂದು ಖರ್ಚುಗಳು ಇವೆ ಎಂದು ಹಣ ವಸೂಲಿ ಮಾಡುತ್ತಿದ್ದಾರೆ ಹಾಗೂ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಖರ್ಚು ಎಂಬ ಹೆಸರಿನಲ್ಲಿ ಹಣ ನೀಡಬೇಕೆಂದು ಸನ್ನದುದಾರರ ಸಭೆಯನ್ನು ಕರೆದು ಹಿಂಸೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಯಾವ ಸನ್ನದುದಾರರು ಸಭೆಗೆ ಹೋಗುವುದಿಲ್ಲವೋ ಅಂತಹ ಸನ್ನದುದಾರರ ಮದ್ಯದಂಗಡಿಯ ಮೇಲೆ ಪ್ರಕರಣ ದಾಖಲಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಆದೇಶ ಮಾಡುತ್ತಾರೆ. ಇದರ ಬಗ್ಗೆ ಕೇಳಿದಾಗ ನಾನು ಯಾವುದೇ ಆದೇಶವನ್ನು ನೀಡಿರುವುದಿಲ್ಲವೆಂದು ತಪ್ಪಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಈ ಎಲ್ಲಾ ಅಂಶಗಳನ್ನು ತಾವುಗಳು ದಯವಿಟ್ಟು ಪರಿಗಣಿಸಿ ಅಬಕಾರಿ ಉಪ ಆಯುಕ್ತರ ಮೆರೆ ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ನಿರ್ಭೀತಿಯಿಂದ ಹಾಗೂ ನ್ಯಾಯಸಮ್ಮತವಾಗಿ ವ್ಯಾಪಾರ ಮಾಡಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವಂತೆ ಮಾಡಿ ನಾವುಗಳು ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಈ ಮೂಲಕ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮಂಚೇಗೌಡ, ಖಜಾಂಚಿ ಯೋಗೀಶ್, ಉಪಾಧ್ಯಕ್ಷ ಐ.ಕೆ ಓಂಕಾರೇಗೌಡ, ಶೇಖರ್, ನಾಸೀರ್, ಎಂ.ಎಸ್ ಪುನೀತ್, ಜಯವರ್ಧನ್ ಮತ್ತಿತರರು ಇದ್ದರು.

Federation of Wine Merchants Association demands action against Deputy Commissioner of Excise Department