ಚಿಕ್ಕಮಗಳೂರು: ರಾಜ್ಯದ ಮಹತ್ವದ ಬೆಳವಣಿಗೆಯಲ್ಲಿ ಜಾತ್ಯಾತೀತ ಜನತಾದಳದ ರಾಜ್ಯ ಉಪಾಧ್ಯಕ್ಷರಾಗಿದ್ದ ಹೆಚ್.ಹೆಚ್. ದೇವರಾಜ್ ಅವರು ಜೆಡಿಎಸ್ ಪಕ್ಷವನ್ನು ತೊರೆದು ಡಿಸೆಂಬರ್ ೩ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆಯುವ ಮತದಾರರ ಸಮಾವೇಶದಲ್ಲಿ ಅಧಿಕೃತವಾಗಿ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ಪಕ್ಷದ ಕೆಲವು ಆಂತರಿಕ ವಿಚಾರಗಳು, ಗುಂಪುಗಾರಿಕೆ, ನನ್ನ ಮೇಲಿನ ಷಡ್ಯಂತ್ರಗಳು ನನಗೆ ಅತ್ಯಂತ ಬೇಸರ ಮೂಡಿಸಿದ್ದು ತೀವ್ರ ಮುಜುಗರ ಉಂಟುಮಾಡಿತ್ತು ಆ ಹಿನ್ನಲೆ ಆಲೋಚನೆ ಮಾಡಿ ಬೆಂಬಲಿಗರೊಂದಿಗೆ ಚರ್ಚಿಸಿ ಜೆಡಿಎಸ್ ಪಕ್ಷವನ್ನು ತೊರೆಯುವುದಾಗಿ ನಿರ್ಧರಿಸಿದ್ದು ಡಿಸೆಂಬರ್ ೩ ರಂದು ವಿಧಾನ ಪರಿಷತ್ ಚುನಾವಣೆ ಹಿನ್ನಲೆ ಮತದಾರರ ಸಮಾವೇಶಕ್ಕೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಹಾಗೂ ಡಿ.ಕೆ.ಶಿವಕುಮಾರ್ ಜಿಲ್ಲೆಗೆ ಆಗಮಿಸಲಿದ್ದು ಅಂದು ನಗರದ ಒಕ್ಕಲಿಗರ ಕಲ್ಯಾಣ ಮಂಟಪದ ಸಮಾವೇಶದಲ್ಲಿ ಬೆಂಬಲಿಗರ ಜತೆಗೆ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದೇನೆ ಎಂದರು.

ಜಿಲ್ಲಾ ಮುಖಂಡರಾದ ಎಂ.ಎಲ್‌ಮೂರ್ತಿ, ಮಾಧ್ಯಮ ವಕ್ತಾರ ಬಿ.ಎಲ್.ಶಂಕರ್, ಎ.ಎನ್, ಮಹೇಶ್, ಅವರ ಮೂಲಕ ರಾಜ್ಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿ ತಮ್ಮ ನಿರ್ಧಾರ ತಿಳಿಸಿದ್ದೇನೆ. ಜಾತ್ಯಾತೀತ ನಿಲುವು ಹೊಂದಿರುವ ನನಗೆ ಕಾಂಗ್ರೆಸ್‌ನ ಜಾತ್ಯಾತೀತ ತತ್ವ, ಸಿದ್ದಾಂತಗಳು ಅದೇ ನಿಟ್ಟಿನಲ್ಲಿ ಇರುವ ಕಾರಣ ಪಕ್ಷ ಬದಲಾವಣೆಗೆ ನಿರ್ಧರಿದ್ದೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರನ್ನು ಬೆಂಬಲಿಸಿ ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ನಡೆದ ಜೆಡಿಎಸ್ ರಾಜ್ಯ ಮಟ್ಟದ ಚಿಂತನ ಮಂಥನ ಸಭೆಗೆ ಆಹ್ವಾನ ನೀಡಿರಲಿಲ್ಲ, ಜತೆಗೆ ಜಿಲ್ಲಾ ಮಟ್ಟದ ಸಭೆಗಳನ್ನು ಗುಪ್ತವಾಗಿ ನಡೆಸುತ್ತಿದ್ದರು ಇದು ಗುಂಪುಗಾರಿಕೆಗೆ ಅವಕಾಶ ನೀಡಿತ್ತು ಎಂದು ಮಾಚಿ ಸಚಿವರ ವಿರುದ್ದ ಪರೋಕ್ಷ ವಾಗ್ದಾಳಿ ಮಾಡಿದ ಅವರು ಷಡ್ಯಂತ್ರ ರೂಪಿಸಿ, ನನ್ನನ್ನು ತೇಜೋವಧೆ ಮಾಡಲು ಗುಂಪುಗಾರಿಕೆ ಮಾಡಲು ಪಕ್ಷದ ಕೆಲವು ನಾಯಕರು ಮುಂದಾಗಿದ್ದರು ಅವರಿಗೆೆ ಒಳಿತಾಗಲಿ ಎಂದು ವ್ಯಂಗ್ಯವಾಡಿದರು.

ರಾಜಕೀಯವಾಗಿ ನಿರಂತರ ರೈತಪರ, ಶೋಷಿತರ ಪರವಾದ ಹೋರಾಟಗಳಿಂದ ರಾಜಕೀಯಕ್ಕೆ ಬಂದವನು ನಾನು. ಮೊದಲ ಬಾರಿ ಮಂಡಲ ಪ್ರಧಾನರಾಗುವ ಮೂಲಕ ರಾಜಕೀಯ ಪ್ರವೇಶಿಸಿ, ಬಳಿಕ ಗ್ರಾಮೀಣ ಹೋರಾಟ ಸಮಿತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜಿಲ್ಲಾ ಪಂಚಾಯಿತಿ ವಸ್ತಾರೆ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಜಿಲ್ಲಾ ಪಂಚಾಯಿತಿ ಪ್ರವೇಶಿಸಿದ್ದಾಗೆ ತಿಳಿಸಿದರು.

೪೦ ವರ್ಷಗಳ ಕಾಲ ರಾಜಕಾರಣ ಮಾಡುತ್ತಾ ಬಂದಿದ್ದೇನೆ ಇದುವರೆಗೂ ನನ್ನ ಮೇಲೆ ಯಾವುದು ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲ, ಜಿಲ್ಲಾ ಪಂಚಾಯಿತಿಗಳಲ್ಲಿ ಹಲವು ಹಗರಣಗಳ ವಿರುದ್ಧ ದ್ವನಿ ಎತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಡಿಸೆಂಬರ್ ೩ ರಂದು ನನ್ನ ಜತೆಗೆ ಹಲವು ಬೆಂಬಲಿಗ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲಿದ್ದು, ದೇಶದ ಹಿತಕ್ಕಾಗಿ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಜಮೀಲ್ ಅಹಮ್ಮದ್ ಇದ್ದರು.

ಇದನ್ನೂ ಓದಿ:

JDS : ಪಕ್ಷ ತೊರೆಯಲಿದ್ದಾರಾ ಜೆಡಿಎಸ್ ಮುಖಂಡ ಹೆಚ್.ಹೆಚ್.ದೇವರಾಜ್.?