ವಿಧಾನಸಭೆ: ‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅರ್ಕಾವತಿ ಡಿನೋಟಿಫಿಕೇಷನ್‌ ಹಗರಣದ ಮೂಲಕ 8 ಸಾವಿರ ಕೋಟಿ ರು.ಗಳಷ್ಟುಬೃಹತ್‌ ಭ್ರಷ್ಟಾಚಾರ ನಡೆದಿದೆ. ನ್ಯಾ. ಕೆಂಪಣ್ಣ ಆಯೋಗದ ವರದಿ ಆಧಾರದ ಮೇಲೆ ಈ ಹಗರಣದಲ್ಲಿ ಯಾರಾರ‍ಯರು ಇದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸಿ, ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಲಾಗುವುದು.’ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಅರ್ಕಾವತಿ ಡಿನೋಟಿಫಿಕೇಷನ್‌ ಪ್ರಕರಣದ ಕುರಿತು ನ್ಯಾ.ಕೆಂಪಣ್ಣ ಆಯೋಗ ಸಲ್ಲಿಸಿದ್ದ ವರದಿಯ ಆಯ್ದ ಭಾಗವನ್ನು ಸದನದಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಘೋಷಣೆ ಮಾಡಿದರು.

ಅಲ್ಲದೆ, ‘ಜಮೀನು ಮಾಲೀಕರ ಹಿತಾಸಕ್ತಿಗಾಗಿ 800ಕ್ಕೂ ಹೆಚ್ಚು ಎಕರೆ ಜಮೀನನ್ನು ‘ರೀಡೂ’ ಹೆಸರಿನಲ್ಲಿ ಡಿನೋಟಿಫಿಕೇಷನ್‌ ಮಾಡಿರುವುದು ಸತ್ಯ’ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ವರದಿ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಸಿದ್ದರಾಮಯ್ಯ ತಮ್ಮ ಅವಧಿಯ ಹಗರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದರು ಎಂದೂ ಆರೋಪಿಸಿದರು.

ಈ ವೇಳೆ ಪ್ರತಿಪಕ್ಷದ ಸದಸ್ಯರು, ವರದಿಯಲ್ಲಿನ ಆಯ್ದ ಭಾಗವನ್ನು ಓದುವುದಲ್ಲ. ಪೂರ್ಣ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚೆಗೆ ಅವಕಾಶ ಕೊಡಿ. ಹಗರಣ ಆಗಿರುವುದು ಸತ್ಯವಾದರೆ ಸಿಬಿಐ ತನಿಖೆಗೆ ಕೊಡಿ ಎಂದು ಒತ್ತಾಯಿಸಿದರು. ಆದರೆ ವರದಿಯನ್ನು ಸದನದಲ್ಲಿ ಮಂಡಿಸಲು ಬಸವರಾಜ ಬೊಮ್ಮಾಯಿ ನಿರಾಕರಿಸಿದರು. ಈ ವೇಳೆ ಕೆಲ ಕಾಲ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ನಡೆಯಿತು.

ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ನಮ್ಮ ಸರ್ಕಾರದ ಮೇಲೆ ಸುಳ್ಳು ಭ್ರಷ್ಟಾಚಾರ ಆರೋಪ ಮಾಡಬೇಡಿ. ನೀವು ಗುತ್ತಿಗೆದಾರ ಕೆಂಪಣ್ಣ ತಂದರೆ, ನಮ್ಮ ಕಡೆಯಿಂದ ಜಸ್ಟೀಸ್‌ ಕೆಂಪಣ್ಣ ಬರುತ್ತಾರೆ ಎಂದು ಹೇಳಿದ್ದೆ. ‘ರೀಡೂ’ ಹೆಸರಿನಲ್ಲಿ ಡಿನೋಟಿಫಿಕೇಷನ್‌ ಆಗಿದೆ ಎಂದು ಕೆಂಪಣ್ಣ ಆಯೋಗ ಸ್ಪಷ್ಟವಾಗಿ ಹೇಳಿದೆ. ಇಲ್ಲಿ ನೋಡಿ’ ಎಂದು ಕೆಲ ಪತ್ರಗಳನ್ನು ಪ್ರದರ್ಶಿಸಿದರು.

ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ಅರ್ಕಾವತಿ ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿದ್ದ 868 ಎಕರೆ ಜಮೀನಿನಲ್ಲಿ 852 ಎಕರೆಯನ್ನು ಕೈಬಿಟ್ಟಿದ್ದಾರೆ. ಹೈಕೋರ್ಚ್‌, ಅಪೆಕ್ಸ್‌ ನ್ಯಾಯಾಲಯದ ಆದೇಶದ ವಿರುದ್ಧವಾಗಿ ‘ರೀಡೂ’ ಹೆಸರಿನಲ್ಲಿ ಡಿನೋಟಿಫಿಕೇಷನ್‌ ಮಾಡಿದ್ದಾರೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಎಕರೆಗೆ 10 ಕೋಟಿ ರು. ಎಂದರೂ 8,000 ಕೋಟಿ ರು.ಗಳಷ್ಟುಭ್ರಷ್ಟಾಚಾರ ಆಗಿದೆ. 8 ಸಾವಿರ ಕೋಟಿ ರು. ಯಾರ ಖಜಾನೆಗೆ ಹೋಯಿತು? ಯಾರ ಮನೆಗೆ ಸೇರಿತು’ ಎಂದು ಪ್ರಶ್ನಿಸಿದ್ದಾರೆ.

ಕೆಂಪಣ್ಣ ಆಯೋಗದ ವರದಿಯಲ್ಲಿ ಮಾಲೀಕರ ಆಸಕ್ತಿ ಕಾಯಲು ಡಿನೋಟಿಫಿಕೇಷನ್‌ ಮಾಡಿರುವುದಾಗಿ ಸ್ಪಷ್ಟವಾಗಿ ತಿಳಿಸಲಾಗಿದೆ. ರೀಡೂ ಹೆಸರಿನಲ್ಲಿ ಮಾಯಾ ಜಾಲ ಸೃಷ್ಟಿಸಿದ್ದು, ಇದೊಂದು ಹಗರಣಕ್ಕಾಗಿ ಯೋಜನೆ (ಸ್ಕೀಮ್‌ ಟು ಸ್ಕಾ್ಯಂ) ಎಂದು ಹೇಳಿದ್ದಾರೆ. ಈ ವರದಿಯನ್ನು ಅನುಷ್ಠಾನ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ವರದಿಯಲ್ಲಿನ ಶಿಫಾರಸುಗಳ ಆಧಾರದ ಮೇಲೆ ಸುಧಾರಣಾ ಕ್ರಮ ಕೈಗೊಳ್ಳಲು ಮಾತ್ರ ವಿಜಯಭಾಸ್ಕರ್‌ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದರು. ತನ್ಮೂಲಕ ಸಿದ್ದರಾಮಯ್ಯ ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕಿತು ಎಂದು ಆರೋಪ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಕೆ.ಜೆ. ಜಾಜ್‌ರ್‍, ನಾಲ್ಕು ವರ್ಷದಿಂದ ಏನು ಮಾಡುತ್ತಿದ್ದೀರಿ. ಒಂದು ವೇಳೆ ನೀವು ಹೇಳುತ್ತಿರುವುದು ಸತ್ಯವಾದರೆ ವರದಿಯನ್ನು ಸದನದಲ್ಲಿ ಮಂಡಿಸಿ ಕ್ರಮ ಕೈಗೊಳ್ಳಿ. ಅವರು (ಸಿದ್ದರಾಮಯ್ಯ) ಸದನದಲ್ಲಿ ಇಲ್ಲದಿರುವುದಾಗಿ ಮಾತನಾಡಿ ವೀರಾವೇಶ ತೋರುವುದಲ್ಲ ಎಂದು ಕಿಡಿ ಕಾರಿದರು.

ಜೆಡಿಎಸ್‌ ಸದಸ್ಯರು, ಮೊದಲು ವರದಿಯನ್ನು ಸದನದಲ್ಲಿ ಮಂಡಿಸಿ. ಎಲ್ಲ ಸದಸ್ಯರಿಗೂ ಒಂದೊಂದು ಪ್ರತಿ ನೀಡಿ. ಕೇವಲ ರಾಜಕೀಯ ಭಾಷಣ ಮಾಡಬೇಡಿ. ನಿಜಕ್ಕೂ ಅಕ್ರಮ ಆಗಿದ್ದರೆ ಸಿಬಿಐ ತನಿಖೆಗೆ ವಹಿಸಿ ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಬಸವರಾಜ ಬೊಮ್ಮಾಯಿ, ನಾನು ಪೂರ್ಣ ಪ್ರಮಾಣದ ವರದಿ ಓದುತ್ತಿಲ್ಲ. ನಿಮ್ಮ ಸಿದ್ದರಾಮಯ್ಯ ಒಂದು ಗುಂಟೆ ಕೂಡ ಡಿನೋಟಿಫಿಕೇಷನ್‌ ಮಾಡಿಲ್ಲ ಎಂದು ಕೆಂಪಣ್ಣ ಆಯೋಗ ವರದಿ ಹೇಳಿದೆ ಎಂದಿದ್ದರು. ಹೀಗಾಗಿ ಇದನ್ನು ಪ್ರಸ್ತಾಪಿಸುತ್ತಿದ್ದೇನೆ ಎಷ್ಟೇ ಎಂದರು.

ಈ ವೇಳೆ ಸುಮ್ಮನೆ ಪ್ರಸ್ತಾಪಿಸಿ ಸುಮ್ಮನಾಗುವುದಲ್ಲ ನಿಮಗೆ ಬದ್ಧತೆಯಿದ್ದರೆ ಸಿಬಿಐ ತನಿಖೆಗೆ ವಹಿಸಿ ಎಂದು ಜೆಡಿಎಸ್‌ ಸದಸ್ಯರು ಒತ್ತಾಯಿಸಿದಾಗ, ಇದರಲ್ಲಿ ಯಾರಾರ‍ಯರು ಇದ್ದಾರೋ ಎಲ್ಲರ ವಿಚಾರಣೆಯನ್ನೂ ಮಾಡುತ್ತೇವೆ. ತಪ್ಪಿತಸ್ಥರನ್ನು ಜೈಲಿಗೆ ಹಾಕುತ್ತೇವೆ ಎಂದು ಹೇಳಿದರು. ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿನ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿ ಹಾಕಿಕೊಳ್ಳಲು ಲೋಕಾಯುಕ್ತವನ್ನು ಸಂಪೂರ್ಣ ನಿಷ್ಕ್ರೀಯ ಮಾಡಿದರು. ಅದಕ್ಕಾಗಿಯೇ ಎಸಿಬಿ ರಚನೆ ಮಾಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ ಮಾಡಿದರು.

ಎಸಿಬಿ ರದ್ದುಗೊಳಿಸಿ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಹಿಂದಿನ ಸರ್ಕಾರ ರಾಜಕಾರಣಿಗಳು, ಅಧಿಕಾರಿಗಳ ಕೇಸು ಮುಚ್ಚಿಕೊಳ್ಳಲು ಎಸಿಬಿ ರಚನೆ ಮಾಡಿತ್ತು ಎಂದು ಸ್ಪಷ್ಟವಾಗಿ ಹೇಳಿದೆ. ನೀವು ಮಾಡಿರುವ ಅಕ್ರಮಗಳನ್ನೆಲ್ಲಾ ಮುಚ್ಚಿ ಹಾಕಿಕೊಳ್ಳಲು ಎಸಿಬಿ ಬಳಸಿಕೊಂಡಿರಿ. ನಿಮ್ಮ ಸರ್ಕಾರದ ಮೇಲೆ ಬಂದಿದ್ದ 61 ಭ್ರಷ್ಟಾಚಾರ ಪ್ರಕರಣಗಳಿಗೆ ಅಷ್ಟಕ್ಕೂ ಎಸಿಬಿ ಬಿ ರಿಪೋರ್ಟ್‌ ಹಾಕಿದೆ. ಇದೇ ನಿಮ್ಮ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದರು. ಈ ವೇಳೆ ಕಾಂಗ್ರೆಸ್‌ನ ಯು.ಟಿ. ಖಾದರ್‌, ಹಾಗಾದರೆ ನೀವು ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳವರೆಗೆ ಎಸಿಬಿ ರದ್ದುಗೊಳಿಸದೆ ಇದ್ದದ್ದು ಯಾಕೆ? ನ್ಯಾಯಾಲಯದಲ್ಲಿ ಎಸಿಬಿ ಪರ ವಕಾಲತ್ತು ವಹಿಸಿದ್ದು ಯಾಕೆ? ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರ ಭಾಸ್ಕರ್‌ ರಾವ್‌ ಪುತ್ರನ ಭ್ರಷ್ಟಾಚಾರ ಆರೋಪ ಬಂದಾಗ ಕೇಂದ್ರದ ಕಾಯ್ದೆಯಡಿ ಎಸಿಬಿ ರಚನೆ ಮಾಡಿತ್ತು. ಲೋಕಾಯುಕ್ತವನ್ನು ಮುಚ್ಚಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಬಸವರಾಜ ಬೊಮ್ಮಾಯಿ, ಆಗಿನ ರಾಜ್ಯಪಾಲರಾಗಿದ್ದ ಹಂಸರಾಜ್‌ ಭರದ್ವಾಜ್‌ ಅವರೇ ಭಾಸ್ಕರ್‌ ರಾವ್‌ ಅವರ ಹೆಸರನ್ನು ಲೋಕಾಯುಕ್ತ ಸ್ಥಾನಕ್ಕೆ ಸೂಚಿಸಿದ್ದು. ಅವರ ಮೇಲೆ ಆರೋಪ ಬಂತು ಎಂದು ಲೋಕಾಯುಕ್ತ ಮುಚ್ಚಿ ಹಾಕುತ್ತೀರಾ? ಶೀತ ಬಂದಿದೆ ಎಂದು ಮೂಗು ಕುಯ್ದುಕೊಳ್ಳಲಾಗುತ್ತದಯೇ ಎಂದು ಪ್ರಶ್ನಿಸಿದರು. ಈ ವೇಳೆ ಕೆಲ ಕಾಲ ವಾದ ಪ್ರತಿವಾದ ನಡೆಯಿತು. ಎಸಿಬಿಯನ್ನು ಮುಚ್ಚುವಂತೆ ಹೈಕೋರ್ಚ್‌ ನೀಡಿರುವ ತೀರ್ಪು ಸರಿಯಲ್ಲ. ಇದರ ವಿರುದ್ಧ ನೀವು ಮೇಲ್ಮನವಿ ಹೋಗಬೇಕಿತ್ತು ಎಂದು ಕಾಂಗ್ರೆಸ್‌ ಸದಸ್ಯ ಕೆ.ಜೆ. ಜಾರ್ಜ್‌ ವಿವಾದಾತ್ಮಕ ಹೇಳಿಕೆ ನೀಡಿದರು. ಇದಕ್ಕೆ ಮುಗಿಬಿದ್ದ ಬಿಜೆಪಿ ಸದಸ್ಯರು, ನಾವು ಎಸಿಬಿ ವಿರುದ್ಧವಾಗಿ ಹಾಗೂ ಲೋಕಾಯುಕ್ತ ಪರವಾಗಿ ಇರುವವರು. ನಾವ್ಯಾಕೆ ಮೇಲ್ಮನವಿ ಹೋಗಬೇಕಿತ್ತು. ನಿಮ್ಮ ಈ ಒತ್ತಾಯದ ಮೂಲಕ ನಿಮ್ಮ ಪಕ್ಷದ ಭ್ರಷ್ಟಾಚಾರದ ಪರ ಮನಃಸ್ಥಿತಿ ಅರ್ಥವಾಗುತ್ತದೆ ಎಂದು ಕಿಡಿ ಕಾರಿದರು.

ನಮ್ಮ ಸರ್ಕಾರದ ಮೇಲೆ ಸುಳ್ಳು ಭ್ರಷ್ಟಾಚಾರ ಆರೋಪ ಮಾಡಬೇಡಿ. ನೀವು ಗುತ್ತಿಗೆದಾರ ಕೆಂಪಣ್ಣ ತಂದರೆ, ನಮ್ಮ ಕಡೆಯಿಂದ ಜಸ್ಟೀಸ್‌ ಕೆಂಪಣ್ಣ ಬರುತ್ತಾರೆ ಎಂದು ಹೇಳಿದ್ದೆ. ಅರ್ಕಾವತಿ ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿದ್ದ 868 ಎಕರೆ ಜಮೀನಿನಲ್ಲಿ 852 ಎಕರೆಯನ್ನು ಕೈಬಿಟ್ಟಿದ್ದೀರಿ. ಸುಪ್ರೀಂಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿ ರೀಡೂ ಹೆಸರಿನಲ್ಲಿ ಡಿನೋಟಿಫಿಕೇಶನ್‌ ಮಾಡಿದ್ದೀರಿ ಎಂದು ಆಯೋಗದ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಎಕರೆಗೆ 10 ಕೋಟಿ ರು. ಎಂದರೂ 8,000 ಕೋಟಿ ರು. ಭ್ರಷ್ಟಾಚಾರ ಆಗಿದೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

8000 crore illegal money went to whose house