ಚಿಕ್ಕಮಗಳೂರು: ಶಾಸಕ ಹೆಚ್.ಡಿ.ತಮ್ಮಯ್ಯ ಅವರು ಕ್ಷೇತ್ರದ ಅಭಿವೃದ್ಧಿಗೆ ತಂದಿರುವ ಅನುದಾನದ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಆಗ್ರಹಿಸಿದರು.

ಶಾಸಕ ಹೆಚ್.ಡಿ.ತಮ್ಮಯ್ಯ ಅವರ ಒಂದು ವರ್ಷದ ಸಾಧನೆ ಶೂನ್ಯವಾಗಿದೆ. ಅವರು ಶ್ರಮ ಹಾಕಿ ಯಾವುದೇ ವಿಶೇಷ ಅನುದಾನ ತಾರದಿದ್ದರೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಒಂದು ವರ್ಷದಲ್ಲಿ ೧೬೪ ಕೋಟಿ ರೂ. ಅನುದಾನ ತಂದಿದ್ದೇನೆ ಎಂದು ಹೇಳುವ ಮೂಲಕ ಮತದಾರರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರು ಕೂಡಲೇ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಇಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಹೊಸ ಬಾಟಲಿಗೆ ಹಳೆ ಮದ್ಯ ಎನ್ನುವ ನಾಣ್ನುಡಿಯಂತೆ ಹಳೆ ಅಭಿವೃದ್ಧಿ ಕಾರ್ಯಗಳ ಮುಂದುವರೆದ ಕಾಮಗಾರಿಗಳಿಗೆ ಮಂಜೂರಾಗಿರುವ ಅನುದಾನವನ್ನು ಸೇರಿಸಿ ಒಂದು ವರ್ಷದ ಸಾಧನೆ ಎಂದು ಹೇಳಿ ಜನರನ್ನು ನಂಬಿಸುವ ಪ್ರಯತ್ನ ಶಾಸಕರು ಮಾಡಿದ್ದಾರೆ ಎಂದು ದೂರಿದರು.

ಮೆಡಿಕಲ್ ಕಾಲೇಜು, ನ್ಯಾಯಾಲಯ ಸಂಕೀರ್ಣ, ನ್ಯಾಯಾಧೀಶರ ವಸತಿ ಗೃಹ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸಿ.ಟಿ.ರವಿ ಅವರು ಶಾಸಕರಾಗಿದ್ದಾಗಲೇ ಮಂಜೂರಾಗಿದ್ದವು. ಅವುಗಳಿಗೆ ಹಂತಹಂತವಾಗಿ ಅನುದಾನ ಬಿಡುಗಡೆ ಆಗುವುದು ಸಹಜ. ಆದರೆ ಅದೂ ಕೂಡ ನನ್ನ ಸಾಧನೆ ಎಂದು ಶಾಸಕರು ಹೇಳಿಕೊಂಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದ್ದಾರೆ.

ಉಚಿತ ಭಾಗ್ಯಗಳನ್ನು ನೀಡುವ ಸಲುವಾಗಿ ಎಲ್ಲ ಕ್ಷೇತ್ರಗಳಲ್ಲಿ ಬೆಲೆ ಏರಿಕೆ ಮಾಡಿ ತೆರಿಗೆದಾರರು ನೆಲಕಚ್ಚುವಂತಾಗಿದೆ. ಸರಕಾರದ ಖಜಾನೆ ಸಂಪೂರ್ಣ ಪಾಪರ್ ಆಗಿದೆ ಎಂದರು.

ಅಭಿವೃದ್ಧಿಗೆ ಸದ್ಯಕ್ಕೆ ಅನುದಾನವಿಲ್ಲ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿರುವುದು ಪ್ರಕಟಗೊಂಡಿದೆ. ಇಂತಹ ಸಂದರ್ಭ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ ಎಂದು ಕ್ಷೇತ್ರದ ಶಾಸಕರು ನಂಬಿಸಲು ಯತ್ನಿಸಿರುವುದು ಮತದಾರರಿಗೆ ಮಾಡಿದ ದ್ರೋಹ ಎಂದರು.

ಸಿ.ಟಿ.ರವಿ ಮತ್ತು ಸಗೀರ್ ಅಹ್ಮದ್ ಅವರು ಶಾಸಕರಾಗಿದ್ದಾಗ ಯಾವುದೇ ಇಲಾಖೆಗಳಲ್ಲಿ ಮಾಮೂಲಿ ವಸೂಲಿ ಇರಲಿಲ್ಲ. ಈಗ ಇವೆಲ್ಲಾ ಮಿತಿಮೀರಿವೆ. ಕಸಾಯಿ ಖಾನೆಗಳು ಮತ್ತೆ ತಲೆ ಎತ್ತಿವೆ ಎಂದು ಹೇಳಿದರು.

ವಕ್ತಾರ ಸೋಮಶೇಖರಪ್ಪ ಮಾತನಾಡಿ ಮೇ.೨೬ ರಂದು ವಿಧಾನಪರಿಷತ್ ಚುನಾವಣಾ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದರು. ಮಾಧ್ಯಮ ವಕ್ತಾರ ಕೋಟೆ ದಿನೇಶ್, ಸಚಿನ್ ಇದ್ದರು.

A white paper should be issued regarding the grant brought for the development of Chikkamagaluru constituency