ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಣಕಲ್ ಮತ್ತು ಕೊಟ್ಟಿಗೆಹಾರ ನಡುವಿನ ರಾಷ್ಟ್ರೀಯ ಹೆದ್ದಾರಿಯ ದೇವರಮನೆ ಕ್ರಾಸ್ ಬಳಿ ಮೆಸ್ಕಾಂ ಲಾರಿಗೆ ಓಮಿನಿ ಮತ್ತು ಆಲ್ಟೋ ಕಾರುಗಳು ಡಿಕ್ಕಿ ಆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಸಂಜೆ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಸಮೀಪದ ಚನ್ನಪಟ್ಟಣ ಗ್ರಾಮದ ಹಂಪಯ್ಯ(65), ಪ್ರಭಾಕರ್ (45), ಮಂಜಯ್ಯ(65), ಪ್ರೇಮಾ(62) ಮೃತ ದುರ್ದೈವಿಗಳು.

ಒಂದೇ ಕುಟುಂಬದ 17 ಮಂದಿ ಎರಡು ಕಾರುಗಳಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ವಾಪಸ್ ಆಗುತ್ತಿದ್ದ ವೇಳೆ ಕೊಟ್ಟಿಗೆಹಾರದಿಂದ ಸ್ವಲ್ಪ ಮುಂದೆ ದೇವರಮನೆ ಕ್ರಾಸ್ ಬಳಿ ಓಮಿನಿ ಕಾರು ಮುಂದಿದ್ದ ವಾಹನವನ್ನು ಓವರ್ ಟೆಕ್ ಮಾಡಲು ಹೋದಾಗ ಎದುರಿನಿಂದ ಬರುತ್ತಿದ್ದ ಮೆಸ್ಕಾಂ ಲಾರಿಗೆ ಡಿಕ್ಕಿಯಾಗಿದೆ.

ಈ ವೇಳೆ ಒಮ್ನಿ ಕಾರನ್ನು ಹಿಂಬಾಲಿಸಿ ಬರುತ್ತಿದ್ದ ಅದೇ ಕುಟುಂಬಕ್ಕೆ ಸೇರಿದ ಆಲ್ಟೊ ಕಾರು ಹಿಂದಿನಿಂದ ಓಮಿನಿ ಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಓಮಿನಿ ಕಾರ್ ನಲ್ಲಿದ್ದ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ಜೊತೆಗೆ ಓಮ್ನಿ ಕಾರಿನಲ್ಲಿದ್ದ ಇತರರು ಹಾಗೂ ಆಲ್ಟೋ ಕಾರಿನಲ್ಲಿದ್ದವರೂ ಗಾಯಗೊಂಡಿದ್ದಾರೆ. ಸಣ್ಣಪುಟ್ಟ ಗಾಯವಾದವರನ್ನು ಸ್ಥಳೀಯ ಆಸ್ಪತ್ರೆಗೆ ಹಾಗೂ ಗಂಭೀರವಾಗಿ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ನಾಗರಾಜಯ್ಯ, ಮಂಜುನಾಥಯ್ಯ, ಅಕ್ಕಮ್ಮ, ಪ್ರತಿಶಾ, ಮಲ್ಲಿಕಾರ್ಜುನ, ನಾನಿಶ್, ಉಮೇಶ್, ಶಿವಲೀಲಾ, ನಯನಾ ಗಾಯಗೊಂಡಿದ್ದಾರೆ. ಪೂಜಾ, ಚಂದನ್, ವೀರೇಶ್, ಸೃಜನ್ ಗಾಯವುದೇ ಗಾಯಗಳಿಲ್ಲದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ಡಿಕ್ಕಿಯ ರಭಸಕ್ಕೆ ಓಮ್ನಿ ಕಾರು ಸಂಪೂರ್ಣವಾಗಿ ಜಖಂ ಆಗಿದೆ. ಒಮ್ನಿ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಆಲ್ಟೋ ಕಾರು ಸಹ ಜಖಂ ಗೊಂಡಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Omni-Alto car collides with Mescom lorry – four members of the same family are dead