ಚಿಕ್ಕಮಗಳೂರು: ಸರ್ಕಾರ ಮಂಜೂರಾತಿ ನೀಡಿ ಭೂಮಿ ಹಕ್ಕುಪತ್ರ ನೀಡಿದ್ದರೂ ರಾಜಕೀಯ ಪ್ರಭಾವ ಬೀರಿ ಅಧಿಕಾರಿಗಳಿಗೆ ಲಂಚ ನೀಡಿ ನಮ್ಮ ಜಮೀನುಗಳನ್ನು ಬೇರೆಯವರಿಗೆ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ ಎಂದು ನೊಂದ ಸಂತ್ರಸ್ತೆ ಭಾಗ್ಯಮಂಜುನಾಥ ತಿಳಿಸಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಗೋಣಿಬೀಡು, ಹೋಬಳಿ ಚಿನ್ನಿಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಯ್ಸಳಲು ಗ್ರಾಮದ ಸರ್ವೇ ನಂಬರ್-೧೧೯ ರಲ್ಲಿ ೧೯೭೮-೮೦ ರಲ್ಲಿ ನನ್ನ ತಂದೆ ಮತ್ತು ಅಜ್ಜನವರು ಸೇರಿದಂತೆ ಪರಿಶಿಷ್ಟ ಜಾತಿಗೆ ಸೇರಿದ ೧೫ ಕುಟುಂಬಗಳಿಗೆ ತಲಾ ೨ ಮತ್ತು ೪ ಎಕರೆಯಂತೆ ಭೂಮಿ ಮಂಜುರಾತಿಯಾಗಿದ್ದು, ನಾವು ಇದಕ್ಕೆ ಕಂದಾಯವನ್ನು ಪಾವತಿಸುತ್ತಾ ಬಂದಿದ್ದೇವೆ ಎಂದರು.

ಇತರೆ ಅನ್ಯ ಕೋಮಿನವರು ಕಂದಾಯ ಅಧಿಕಾರಿಗಳ ಕುಮ್ಮಕ್ಕಿನಿಂದ ಇದೇ ಸರ್ವೆ ನಂಬರ್‌ಗೆ ಹಕ್ಕುಪತ್ರದ ಮೇಲೆ ನಮ್ಮ ಜಮೀನಿನ ಮೇಲೆಯೇ ಅವರಿಗೆ ಪಹಣಿ ಮಾಡಿಕೊಟ್ಟು ನಮಗೆ ತೊಂದರೆಯನ್ನು ನೀಡುತ್ತಿದ್ದಾರೆ. ಈ ಜಮೀನಿನಿಂದ ನಮಗೆ ಅಲ್ಪ-ಸ್ವಲ್ಪ ಆದಾಯ ಬರುತ್ತಿರುವುದರಿಂದ ನಮ್ಮ ಜೀವನ ನಡೆಯುತ್ತಿದ್ದು, ನಮ್ಮ ಜಮೀನನ್ನು ಇತರೆ ಕೋಮಿನವರು ಒತ್ತುವರಿ ಮಾಡಿಕೊಂಡು ಪಹಣಿಯನ್ನು ಮಾಡಿಕೊಂಡಿದ್ದಾರೆ ಎಂದು ದೂರಿದರು.

ಈ ಬಗ್ಗೆ ಹಲವು ಬಾರಿ ತಾಲ್ಲೂಕು ಕಚೇರಿಗೆ ಮನವಿಯನ್ನು ಕೊಟ್ಟಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಇದರಿಂದ ನಮಗೆ ತುಂಬಾ ಅನ್ಯಾಯ ಆಗಿದೆ. ಕಾರಣ ಪರಿಶಿಷ್ಟ ಜಾತಿಯವರಾದ ನಾವು ಸೇರಿದಂತೆ ೧೫ ಪರಿಶಿಷ್ಟ ಕುಟುಂಬಗಳು ೧೯೭೮-೮೦ ರಲ್ಲಿ ಸರ್ಕಾರದಿಂದ ಭೂ ಮಂಜೂರಾತಿಯಂತೆ ಸಾಗುವಳಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಒತ್ತುವರಿದಾರರಿಂದ ಭೂಮಿಯನ್ನು ನಮಗೆ ಹಿಂತಿರುಗಿಸಿಕೊಡಲು ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಿ ಅನ್ಯ ಕೋಮಿನವರಿಗೆ ಪಹಣಿ ಕೊಟ್ಟಿರುವ ಕಂದಾಯ ಅಧಿಕಾರಿಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸಂಬಂಧಿಸಿದವರಿಗೆ ಸೂಚಿಸಬೇಕಾಗಿ ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರುಗಳಾದ ಹರೀಶ್, ಸುಂದ್ರೇಶ್, ಮಂಜುನಾಥ ಉಪಸ್ಥಿತರಿದ್ದರು.

Aggrieved victim Bhagyamanjunath press conference