ಚಿಕ್ಕಮಗಳೂರು: ಸಮೀಪದ ಕೂದುವಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ನೀಲಿ ಧ್ವಜಗಳ ವೃತ್ತವನ್ನು ನಿರ್ಮಿಸಲಾಗಿತ್ತು. ಪುಷ್ಪಾಲಂಕೃತ ತೆರದ ವಾಹನದಲ್ಲಿ ಮಧ್ಯಾಹ್ನ ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಕರೆದೊಯ್ಯಲಾಯಿತು. ಗ್ರಾಮದ ಪುರುಷರು, ಮಹಿಳೆಯರು, ಯುವಜನರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ನಡೆಯುವ ಮುಂಭಾಗದ ರಸ್ತೆಯಲ್ಲಿ ಮಹಿಳೆಯರು ರಂಗೋಲಿಯನ್ನು ಬಿಡಿಸಿ ಕಾರ್ಯ ಕ್ರಮದ ಅಂದವನ್ನು ಹೆಚ್ಚಿಸಿದರು. ಊರಿನ ವಿವಿಧ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ಮನೆಯ ಮುಂಭಾಗದಲ್ಲಿ ರಂಗೋಲಿ ಬಿಡಿಸಿ ಮೆರವಣಿಗೆಯನ್ನು ಸ್ವಾಗತಿಸಿದ್ದು ಕಂಡು ಬಂತು.

ಮೆರವಣಿಗೆ ಸಾಗುವಾಗ ಧ್ವನಿವರ್ಧಕದಲ್ಲಿ ಬರುತ್ತಿದ್ದ ಭೀಮಗೀತೆ ಮತ್ತು ವಿವಿಧ ಹಾಡುಗಳಿಗೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು. ಅಂಬೇಡ್ಕರ್ ಯುವಕಸಂಘ ಮತ್ತು ಸವಿತ ಯುವತಿ ಮಂಡಳಿ ವತಿಯಿಂದ ಗ್ರಾಮಸ್ಥರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಕಸಂಘದ ಅಧ್ಯಕ್ಷ ಸಂದೀಪ್ ವಹಿಸಿದ್ದರು. ಅಂಬೇಡ್ಕರ್ ಕುರಿತು ನಿವೃತ್ತ ಮುಖ್ಯೋಪಾಧ್ಯಾಯ ಮತ್ತು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತಕುಮಾರ್ ಮಾತನಾಡಿದರು. ಸವಿತ ಯುವತಿ ಮಂಡಳಿ ಅಧ್ಯಕ್ಷೆ ಅಭಿಲಾಷ, ಸಂಘದ ಉಪಾಧ್ಯಕ್ಷ ಇಂದ್ರೇಶ್, ಚಿಂತಕ ಮಂಜುನಾಥಸ್ವಾಮಿ,ಗ್ರಾಮದ ಮುಖಂಡ ಕೆ.ಎಂ. ಮಂಜುನಾಥ, ಉಪಾಧ್ಯಕ್ಷ ಜವರಯ್ಯ, ಮಂಜಯ್ಯ, ದಾನಿ ದುರ್ಗೇಗೌಡ, ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಕೆ.ಜೆ. ಸತೀಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್, ಹಂಪಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಕೆ.ಹೆಚ್. ಮಹೇಶ್, ಗ್ರಾಮಪಂಚಾಯಿತಿ ಸದಸ್ಯರಾದ ಅರವಿಂದ, ಶೈಲಾಜಗದೀಶ್, ಮುಖಂಡ ಸುಬ್ಬೇಗೌಡ, ಅಂಬೇಡ್ಕರ್ ವಿಚಾರ ವೇದಿಕೆ ಮುಖಂಡ ಕೆ.ಜೆ ಮಂಜುನಾಥ ಇದ್ದರು.

ಉತ್ತಮ ಸೇವೆಗಾಗಿ ವಸ್ತಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಅಭಿನಂದನ್ ಅವರನ್ನು ಸನ್ಮಾನಿಸಲಾಯಿತು.ಯುವಕಸಂಘ, ಮತ್ತು ಯುವತಿ ಮಂಡಳಿಯ ಯಶಸ್ವಿನಿ ಮತ್ತು ಕೆ.ಆರ್.ಸಾರ್ಥಕ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಯಶವಂತ್ ಹಾಗೂ ಯುವತಿ ಮಂಡಳಿ ಮಾಜಿ ಅಧ್ಯಕ್ಷೆ ಅಶ್ವಿನಿ ನಿರೂಪಿಸಿದರು.

Ambedkar Jayanti in Kooduvalli village