ಚಿಕ್ಕಮಗಳೂರು: ರಾಜ್ಯದಲ್ಲಿ ಬರಗಾಲ ತೀವ್ರವಾಗಿದ್ದರು ಕೇಂದ್ರ ಸರ್ಕಾರ ನಿಗದಿತ ಬರಪರಿಹಾರ ನೀಡಿಲ್ಲ. ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿ.ಟಿ.ರವಿ ಸೇರಿದಂತೆ ಮುಖಂಡರು ಇದನ್ನು ಪ್ರಶ್ನಿಸುವ ಬದಲು ಸಮರ್ಥನೆ ಮಾಡಿಕೊಳ್ಳುವುದು ಎಷ್ಟು ಸರಿ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಪ್ರಶ್ನಿಸಿದ್ದಾರೆ.

ಕಳೆದ ಏಳು ತಿಂಗಳಿಂದ ರಾಜ್ಯ ಸರ್ಕಾರ ಬರಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದರೂ ಇದಕ್ಕೆ ಸ್ಪಂದಿಸಲಿಲ್ಲ. ಸುಪ್ರೀಂಕೋರ್ಟ್ ಸೂಚನೆ ಬಳಿಕ ಬರಪರಿಹಾರ ಬಿಡುಗಡೆ ಮಾಡಿದೆ. ಸೂಕ್ತ ಪರಿಹಾರ ನೀಡದೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆಪಾದಿಸಿದ್ದಾರೆ.

ಹಾಸನದಲ್ಲಿ ನಾಯಕರೊಬ್ಬರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿದ್ದು, ಈ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್‌ ಯಾವುದೇ ಮುಖಂಡರು ಮಾತನಾಡದೆ ಮೌನವಹಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಸಿ.ಟಿ ರವಿ ಪ್ರತಿ ಮಾತಿಗೂ ಭಾರತ ಮಾತೆಯ ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ. ಈಗ ನೂರಾರು ಮಹಿಳೆಯರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಧ್ವನಿ ಎತ್ತದಿರುವುದು ಅನುಮಾನ ಮೂಡಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

The central government has not provided the prescribed drought relief